ಉಡುಪಿ, ಮೇ 27(Daijiworld News/SM): ಅಂಬೆಗಾಲಿಕ್ಕಿಕೊಂಡು ಬೆಳೆದ ದಾಯ್ಜಿವರ್ಲ್ಡ್ ಸುದ್ದಿವಾಹಿನಿಗೆ ಇದೀಗ 5ನೇ ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಈ ಬಾರಿ ಕೃಷ್ಣನಗರಿ ಉಡುಪಿಯಲ್ಲಿ ನಡೆದ ಐದನೇ ವರ್ಷದ ಸಂಭ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ಮಾಧ್ಯಮ ಲೋಕದಲ್ಲಿ ಹೆಸರಾಂತ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ದಾಯ್ಜಿವರ್ಲ್ಡ್ ಡಾಟ್ ಕಾಂ ಇಂದು ಕೇವಲ ಕರಾವಳಿಯಲ್ಲಷ್ಟೇ ಅಲ್ಲದೇ, ದೇಶ, ವಿದೇಶದಲ್ಲೂ ತನ್ನ ಓದುಗರನ್ನು ತಲುಪಿದೆ. ಡಾಟ್ಕಾಂ ಸಹಿತ ದಾಯ್ಜಿ ವೀಕ್ಲಿ, ದಾಯ್ಜಿವರ್ಲ್ಡ್ ಆಡಿಯೋ ವಿಡಿಯೋ ಸ್ಟೂಡಿಯೋ, ದಾಯ್ಜಿವರ್ಲ್ಡ್ ರೇಡಿಯೋ ಜೊತೆಗೆ ದಾಯ್ಜಿವರ್ಲ್ಡ್ 24x7 ಇದೀಗ ಅಷ್ಟೇ ಜನಪ್ರಿಯವಾಗಿದೆ.
ದಾಯ್ಜಿವರ್ಲ್ಡ್ ವಾಹಿನಿಗೆ ಐದನೇ ವರ್ಷದ ಸಂಭ್ರಮವನ್ನು ಉಡುಪಿಯಲ್ಲಿ ಅದ್ದೂರಿಯಾಗಿ ನಡೆಸಿತು. ಕಾರ್ಯಕ್ರಮದಲ್ಲಿ ಜೂನಿಯರ್ ಮಸ್ತಿ ಸೀಸನ್ 2ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಐದು ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ, ಸಂಗೀತ, ನೃತ್ಯ, ಮನೋರಂಜನಾ ಕಾರ್ಯಕ್ರಮ ನಡೆಯಿತು.
5ನೇ ವರ್ಷದ ಸಂಭ್ರಮಾಚರಣೆಯನ್ನು ಉಡುಪಿ ಡಯಾಸೀಸ್ ನ ಕಮ್ಯೂನಿಕೇಶನ್ ಸೆಂಟರ್ ನಿರ್ದೇಶಕ ಫಾ. ವಲೇರಿಯನ್ ಮೆಂಡೋನ್ಸಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, `ಕಲೆ ವಿಶೇಷವಾದುದು, ಕಲೆಗೆ ಜಾತಿ ಇಲ್ಲ. ಸಂಗೀತ ನೃತ್ಯ ಸಾರ್ವತ್ರಿಕವಾಗಿದೆ. ಇನ್ನು ವಾಹಿನಿ ನಡೆದು ಬಂದಿರುವ ಹಾದಿ ವಿಶಿಷ್ಟವಾಗಿದೆ ಎಂದರು. ಮುಂದೆಯೂ ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ವಾಹಿನಿ ನೀಡಲು ದೇವರು ಆಶೀರ್ವಾದ ನೀಡಲಿ' ಎಂದು ಪ್ರಾರ್ಥಿಸಿದರು.
ಇನ್ನು ಸಮಾರಂಭದಲ್ಲಿ ಮಾತನಾಡಿದ ದಾಯ್ಜಿವರ್ಲ್ಡ್ ಟಿವಿಯ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಮಾತನಾಡಿ, `ಕರಾವಳಿಯಲ್ಲಿ ಮಾತ್ರವಲ್ಲದೆ ಹಲವೆಡೆಗಳಲ್ಲಿ ಲಕ್ಷಾಂತರ ವೀಕ್ಷಕರು ನಮ್ಮ ವಾಹಿನಿಗಿದ್ದು, ಪ್ರತಿನಿತ್ಯ ನಮ್ಮ ಕಾರ್ಯಕ್ರಮಗಳನ್ನು ವೀಕ್ಷಿಸಿ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ'. ಎಲ್ಲಾ ವೀಕ್ಷಕರಿಗೆ ಅವರು ಕೃತಜ್ಞೆಗಳನ್ನು ಸಲ್ಲಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ದಾಯ್ಜಿವರ್ಲ್ಡ್ ಟಿವಿಯ ಮ್ಯಾನೆಜಿಂಗ್ ಡೈರೆಕ್ಟರ್ ಅಲೆಕ್ಸಸ್ ಕ್ಯಾಸ್ಟಲಿನೊ, `ಕರಾವಳಿಯಲ್ಲಿ ಸುದ್ದಿ ವಾಹಿನಿಯಾಗಿ ನೈಜ ಸುದ್ದಿಯನ್ನು ಜನತೆಗೆ ನೀಡುವಲ್ಲಿ ನಾವು ಯಶಸ್ವಿಯಾಗಿದ್ದು, ಇದಕ್ಕೆ ನಿಮ್ಮ ಪ್ರೋತ್ಸಾಹ ಹಾಗೂ ಆಶೀರ್ವಾದ ಕಾರಣ. ಸುದ್ದಿಯಲ್ಲಿ ಯಾವುದೇ ರಾಜಕೀಯ, ರಾಜಿ ಮಾಡದೆ, ರಾಜಕೀಯ ಮುಂದಾಳುಗಳು ತಪ್ಪು ಮಾಡಿದಂತಹ ಸಂದರ್ಭ ಅವುಗಳನ್ನು ತಿದ್ದುವ ಕಾರ್ಯ, ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಸಾಮಾಜಕ್ಕೆ ನೆರವಾಗುವ, ಸಮಸ್ಯೆಗಳನ್ನು ತೆರೆದಿಟ್ಟು ಅಧಿಕಾರಿಗಳು, ಜನ ನಾಯಕರ ಕಣ್ಣು ತೆರೆಯುವ ಕಾರ್ಯ ನಡೆಸುತ್ತ ಬಂದಿದ್ದೇವೆ. ಜಾತಿ, ಧರ್ಮ, ಪಂಗಡ, ಪಕ್ಷಗಳನ್ನು ಲೆಕ್ಕಿಸದೆ ಸರಿ ತಪ್ಪುಗಳನ್ನು ಇದ್ದಂತೆ ಚಿತ್ರಿಸಿರುವ ಹಿರಿಮೆ ನಮಗಿದೆ'. ಕಳೆದ ೫ ವರ್ಷಗಳಿಂದ ನಮಗೆ ನಿರಂತರವಾಗಿ ಪ್ರೋತ್ಸಾಹ ನೀಡಿದ ಎಲ್ಲಾ ವೀಕ್ಷಕರಿಗೆ ಧನ್ಯವಾದಗಳನ್ನು ಅಲೆಕ್ಸಸ್ ಕ್ಯಾಸ್ಟಲಿನೊ ವ್ಯಕ್ತಪಡಿಸಿದರು.
ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಫೆರ್ಮಾಯಿ, ಕೆನರಾ ಬೀಚ್ ರೆಸ್ಟೋರಾಂಟ್ನ ಜೆಸಿಂತಾ ಡಿ ಸೋಜ, ಸನ್ ಪ್ರೀಮಿಯಂ ಆಯಿಲ್ನ ಸೇಲ್ಸ್ ಆಫೀಸರ್ ದೀಪಕ್, ದಾಯ್ಜಿವರ್ಲ್ಡ ಟಿವಿಯ ಮುಖ್ಯಸ್ಥರಾದ ಅಲೆಕ್ಸಸ್ ಕ್ಯಾಸ್ಟೆಲಿನೋ, ಕಿಶೋರ್ ಗೊನ್ಸಾಲ್ವೇಸ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇನ್ನು ನೃತ್ಯ ಮನೋರಂಜನೆ ಬಳಿಕ ಘೋಷಣೆ ಮಾಡಲಾದ ಕಾರ್ಯಕ್ರಮದಲ್ಲಿ ಜೂನಿಯರ್ ಮಸ್ತಿ ಸೀಸನ್ 2ರ ಸ್ಪರ್ಧೆಯ ವಿನ್ನರ್ ಆಗಿ ಮಾನ್ವಿ ಎಂ ಜೈನ್ ಹೊರಹೊಮ್ಮಿದರೆ, ಫಸ್ಟ್ ರನ್ನರ್ ಅಪ್ ಚೈತನ್ಯಾ ಮತ್ತು 2ನೇ ರನ್ನರ್ ಅಪ್ ಆಗಿ ಸಾನ್ವಿ ಶ್ಯಾನುಭಾಗ್ ಮತ್ತು ನಿಹಾಲಿ ರೈ ಪ್ರಶಸ್ತಿ ಪಡೆದುಕೊಂಡರು. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನದ ಜೊತೆಗೆ ಟ್ರೋಫಿ ನೀಡಲಾಯಿತು.
ಇದೇ ವೇಳೆ ಪ್ರಶಾಂತ್ ಸಿ.ಕೆ. ಅವರ ಹಾಸ್ಯ ಕಾರ್ಯಕ್ರಮ ಮನೋರಂಜಿಸಿದರೆ, ನೃತ್ಯಪಟುಗಳು ತಮ್ಮ ಅಮೋಘ ಪ್ರದರ್ಶನ ನೀಡಿದರು. ‘ಮಿಸೆಸ್ ಮೀನಾ ಅಂಡ್ ಫ್ಯಾಮಿಲಿ’, ‘ಮ್ಹಜೊ ತಾಳೊ ಗಾಯ್ತಾಲೊ’ ಕಲಾವಿದರು ಪ್ರೇಕ್ಷಕರನ್ನು ಮನೋರಂಜಿಸಿದರು. ಉಡುಪಿಯಿಂದ ಪ್ರಸಾರವಾದ ಚಾಣಕ್ಯ ಕಾರ್ಯಕ್ರಮದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಡುಪಿ ಇಂಜಿಯರ್ಸ್ ಅಂಡ್ ಆರ್ಕಿಟೆಕ್ಟ್ನ ಅಧ್ಯಕ್ಷ ಎಂ ನಾಗೇಶ್ ಹೆಗ್ಡೆ, ಉದ್ಯಮಿ ರೋಶನ್ ಡಿ ಸೋಜ ಮೊದಲಾದವರು ಸ್ಪರ್ಧಿಗಳ ಘೋಷಣೆ ಮಾಡಿದರು. ವೇದಿಕೆಯಲ್ಲಿ ಪೊಡಕ್ಷನ್ ಮ್ಯಾನೇಜರ್ ಮಹಮ್ಮದ್ ನಿಸಾರ್, ದಾಯ್ಜಿವರ್ಲ್ಡ್ ಆಡಿಯೋ ವಿಶುವಲ್ಸ್ ಪ್ರೈ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ರಿತ್ ಪಿಂಟೋ, ಉಡುಪಿ ವಿಭಾಗದ ಮ್ಯಾನೇಜರ್ ಕೆವಿನ್ ಮೊದಲಾದವರಿದ್ದರು.