ಮಂಗಳೂರು, ಸೆ.13(DaijiworldNews/AA): ಪಿಲಿಕುಳ ಕಂಬಳದ ಪೂರ್ವಭಾವಿ ಸಭೆಗೆ ಜಿಲ್ಲಾಡಳಿತ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಆಹ್ವಾನಿಸಿಲ್ಲ ಎಂದು ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರು ಸುಳ್ಳು ಆರೋಪ ಮಾಡಿದ್ದಾರೆ. ಜೊತೆಗೆ ಇದು ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನ. ಪಿಲಿಕುಳ ಕಂಬಳದಲ್ಲಿ ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ. ಇದು ಅಗತ್ಯವಿದೆಯೇ? ಎಂದು ಕಾಂಗ್ರೆಸ್ ರಾಜ್ಯ ವಕ್ತಾರೆ ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಲಿಕುಳ ಕಂಬಳಕ್ಕೂ ಬಿಲ್ಲವ ಸಮುದಾಯಕ್ಕೂ ಏನು ಸಂಬಂಧ? ಇದರಲ್ಲಿ ಜಾತಿ ವಿಷಯವನ್ನು ಎತ್ತಿ ಕಟ್ಟೋದು ಎಷ್ಟು ಸಮಂಜಸ? ಜಿಲ್ಲಾಡಳಿತ ಉಮಾನಾಥ ಕೋಟ್ಯಾನ್ ಅವರನ್ನು ಪೂರ್ವಭಾವಿ ಸಭೆಗೆ ಆಹ್ವಾನಿಸಿಲ್ಲ ಎನ್ನುವುದು ಸುಳ್ಳು. ಜಿಲ್ಲಾಧಿಕಾರಿ ಅವರು ಶಾಸಕರ ಮೊಬೈಲ್ ಗೆ ಕರೆ ಮಾಡಿದ್ದರು. ಆದರೆ ಅವರು ಕರೆ ಸ್ವೀಕರಿಸಿರಲಿಲ್ಲ. ಬಳಿಕ ಎಂಎಂಎಸ್ ಮೂಲಕ ಆಹ್ವಾನಿಸಿದ್ದಾರೆ. ಜೊತೆಗೆ ಕಂಬಳ ಸಮಿತಿ ಉಮಾನಾಥ ಕೋಟ್ಯಾನ್ಗೆ ಆಹ್ವಾನ ನೀಡಿತ್ತು ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಲಿಕುಳ ಅಭಿವೃದ್ಧಿಗಾಗಿ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಇದೀಗ ಕಂಬಳ ಆಯೋಜಿಸುವ ಮೂಲಕ ಪಿಲಿಕುಳದಲ್ಲಿ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕೆ ಸಹಕರಿಸುವ ಬದಲು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಅವರು ಬಿಲ್ಲವ ಸಮುದಾಯದ ಬಗ್ಗೆ, ಕೋಟಿ ಚೆನ್ನಯರ ಬಗ್ಗೆ, ಜನಾರ್ದನ ಪೂಜಾರಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವಾಗ ಈಗ ಆರೋಪ ಮಾಡುವವರು ಎಲ್ಲಿದ್ದರು? ಅವರನ್ನು ಕನಿಷ್ಠ ಪಕ್ಷದ ಹುದ್ದೆಯಿಂದಲೂ ತೆಗೆಯುವ ಕೆಲಸ ಮಾಡಿಲ್ಲ. ಆಗ ಬಿಲ್ಲವರ ಕಾಳಜಿ ಇರಲಿಲ್ಲವೆ ಎಂದು ಪ್ರಶ್ನೆ ಮಾಡಿದರು.
ಉಮಾನಾಥ ಕೋಟ್ಯಾನ್ ತಮ್ಮ ಅಧಿಕಾರವಧಿಯಲ್ಲಿ ಪಿಲಿಕುಳಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎನ್ನುವುದನ್ನು ತಿಳಿಸಲಿ. ಜಿಲ್ಲಾಧಿಕಾರಿಯಾದವರು ಪ್ರತಿಯೊಂದು ಕಾರ್ಯಕ್ರಮಗಳಿಗೆ ಶಾಸಕರ ಮನೆಗೆ ಹೋಗಿ ಆಹ್ವಾನ ನೀಡಬೇಕಿಲ್ಲ, ಕರೆ ಮಾಡಿ ತಿಳಿಸುವುದು ವಾಡಿಕೆ. ಮನೆಗೇ ಹೋಗಿ ಆಹ್ವಾನ ನೀಡಬೇಕು ಎನ್ನುವ ಶಾಸಕರ ಮನಸ್ಥಿತಿ ಏನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡರಾದ ನೀರಜ್ಪಾಲ್, ಚಂದ್ರಹಾಸ ರೈ, ಮೋಹನ್ ಕೋಟ್ಯಾನ್ ಉಪಸ್ಥಿತರಿದ್ದರು.