ಬೆಳ್ಮಣ್, ಮೇ 27(Daijiworld News/SM): ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ 1ರ ಬೆಳ್ಮಣ್ ಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿದ ಟೋಲ್ ಗೇಟ್ ಕೇಂದ್ರ ಇಲ್ಲಿನ ಗ್ರಾಮಸ್ಥರ ಪ್ರತಿಭಟನೆಯಿಂದ ದೂರ ಸರಿಯಿತೇ.? ಅಥವಾ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿಯಿತೇ..? ಎನ್ನುವ ಅನುಮಾನ ಈ ಭಾಗದ ಗ್ರಾಮಸ್ಥರಲ್ಲಿ ಕಾಡುತ್ತಿರುವಾಗ ಮತ್ತೆ ಇದೀಗ ಗುಟ್ಟಾಗಿ ಟೋಲ್ ಗೇಟ್ ನಿರ್ಮಾಣಕ್ಕೆ ಸರ್ವೆ ಕಾರ್ಯ ಸೋಮವಾರ ನಡೆದಿದೆ.
ರಾಜ್ಯ ಹೆದ್ದಾರಿ 1ರಲ್ಲಿ ಸುಂಕ ವಸೂಲಾತಿ ಕೇಂದ್ರ ನಿರ್ಮಿಸಿ ವಾಹನ ಸವಾರರಿಂದ ಸುಂಕವನ್ನು ಪಡೆಯುತ್ತೇವೆ ಎಂದು ಗುತ್ತಿಗೆ ಪಡೆದುಕೊಂಡ ಮೈಸೂರಿನ ಮಿತ್ರಾ ಇನ್ಪೋ ಸೊಲ್ಯೂಷನ್ ಸಂಸ್ಥೆ ಹಿಂದೆ ಸರಿದಿದೆ ಎನ್ನುವ ಸುದ್ದಿ ಕೇಳಿಬರುತ್ತಿದ್ದು ಇದೀಗ ಇನ್ನೊಂದು ಖಾಸಗಿ ಸಂಸ್ಥೆ ಕುಂದಾಪುರ ಮೂಲದ ಎಜೇನ್ಸಿ ಮೂಲಕ ಸರ್ವೆ ಕಾರ್ಯಕ್ಕೆ ಇಳಿದಿದೆ.
ಬೆಳ್ಮಣ್ ಗ್ರಾಮ ಪಂಚಾಯತಿ ಮುಂಭಾಗದಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ಇಬ್ಬರು ಯುವಕರು ಸೋಮವಾರ ಬೆಳಿಗ್ಗೆಯಿಂದ ವಾಹನಗಳ ಲೆಕ್ಕವನ್ನು ಬರೆಯುತ್ತಿರುವುದನ್ನು ಗಮನಿಸಿದ ಬೆಳ್ಮಣ್ ಭಾಗದ ಗ್ರಾಮಸ್ಥರು ಸರ್ವೆ ನಡೆಸುವ ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡರು. ಈ ಹಿನ್ನಲೆಯಲ್ಲಿ ಸರ್ವೆ ನಡೆಸುತ್ತಿರುವುದು ಟೋಲ್ ಗೇಟ್ ನಿರ್ಮಾಣಕ್ಕೆ ಎನ್ನುವುದು ಸ್ಪಷ್ಟವಾಗಿದೆ.
ತರಾಟೆಗೆ ಪಡೆದ ಗ್ರಾಮಸ್ಥರು :
ಸೋಮವಾರ ಬೆಳಿಗ್ಗೆಯಿಂದ ಪಂಚಾಯತಿ ಮುಂಭಾಗದ ತಂಗುದಾಣದಲ್ಲಿ ಸರ್ವೆ ನಡೆಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಸರ್ವೆ ನಡೆಸುವ ಸಿಬ್ಬಂದಿಗಳನ್ನು ವಿಚಾರಿಸಿ ತರಾಟೆ ಪಡೆದುಕೊಂಡರು. ಈ ಸಂದರ್ಭ ಅಥರ್ವ ಏಜೆಸ್ಸಿನ ಅಧಿಕಾರಿ ನಮಗೆ ಯಾವುದಕ್ಕೆ ಸರ್ವೆ ಎನ್ನುವುದು ಗೊತ್ತಿಲ್ಲ. ಸಂಸ್ಥೆ ಒದಗಿಸಿದ ಸರ್ವೆ ಕಾರ್ಯವನ್ನು ಮಾಡುತ್ತಿದ್ದೇವೆ ಎನ್ನುವ ಉತ್ತರವನ್ನು ನೀಡಿದ್ದಾರೆ.
ಆದರೆ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಬೆಳ್ಮಣ್ ಭಾಗದಲ್ಲಿ ಟೋಲ್ ಬಿಡಿ ಒಂದು ಟೆವೆಲ್ ಹಾಕಲು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ಬಳಿಕ ಸರ್ವೆ ನಡೆಸುವುದನ್ನು ಸಿಬ್ಬಂದಿಗಳು ಸ್ಥಗಿತಗೊಳಿಸಿದರು. ಚುನಾವಣೆ ಸಂದರ್ಭ ಸುಮ್ಮನಾಗಿದ್ದ ಟೋಲ್ ವಿಚಾರ ಇದೀಗ ಮತ್ತೆ ಗರಿಗೆದರಿದೆ. ಯಾವುದೇ ಕಾರಣಕ್ಕೂ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶವನ್ನು ನೀಡುವುದಿಲ್ಲ ಎಂದು ಬೆಳ್ಮಣ್ ಭಾಗದ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.