ಮಂಗಳೂರು ನ 28: ಡಿವೈಎಸ್ ಪಿ ಗಣಪತಿ ಹಾಗೂ ಬಿಜೆಪಿ ಕಾರ್ಯಕರ್ತ ಕೊಲೆ ಪ್ರಕರಣದಲ್ಲಿ ಸಚಿವ ಕೆ.ಜೆ ಜಾರ್ಜ್ ಮತ್ತು ಸಚಿವ ವಿನಯ್ ಕುಲಕರ್ಣಿ ಅವರ ರಾಜಿನಾಮೆಗೆ ಅಗ್ರಹಿಸಿ ಜಿಲ್ಲಾ ಬಿಜೆಪಿ ಜಿಲ್ಲಾ ಘಟಕ ನ 28 ರ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಪ್ರಾಮಾಣಿಕ ಅಧಿಕಾರಿಗಳ ಕರ್ತವ್ಯ ನಿರ್ವಹಿಸದಂತಾಗಿದೆ. ಡಿವೈಎಸ್ ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸಚಿವ ಕೆ.ಜೆ ಜಾರ್ಜ್ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿದೆ . ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣ ಹಾಗೂ ಅವರ ಪರ ವಕೀಲರಿಗೆ ಬೆದರಿಕೆ ಹಾಕಿದ ಆರೋಪ ಸಚಿವ ವಿನಯ್ ಕುಲಕರ್ಣಿ ಮೇಲಿದ್ದರೂ , ತಮ್ಮ ಸ್ಥಾನದಲ್ಲಿ ಮುಂದುವರಿದಿರುದು ನಿಜಕ್ಕೂ ದುರದೃಷ್ಟದ ಸಂಗತಿ ಎಂದು ಕಿಡಿಕಾರಿದರು.
ಇದಲ್ಲದೆ ಹಲವಾರು ಪ್ರಕರಣಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಇದರ ಪರಿಣಾಮವಾಗಿ ಅನೇಕ ಘಟನಾವಳಿಗಳು ನಡೀತಾ ಇದೆ. ಅಪರಾಧ ಪ್ರಕರಣಗಳಲ್ಲಿ ಷಾಮೀಲಾದ ಆರೋಪಿಗಳ ವಿರುದ್ದ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದಲ್ಲದೆ ಸರ್ಕಾರದ ಸಚಿವರಾಗಿರುವವರೇ ಗಂಭೀರ ಆರೋಪದಲ್ಲಿ ಸಿಲುಕಿರುವುದು ರಾಜ್ಯದ ಜನತೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.