ಬಂಟ್ವಾಳ,ಮೇ 27(Daijiworld News/MSP): ಮಸೀದಿಯೊಂದರ ಶಾದಿಮಹಲ್ ನಿರ್ಮಾಣಕ್ಕೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಣವನ್ನು ದುರುಪಯೋಗ ಮಾಡಲಾಗಿದೆ ಎಂಬ ಆರೋಪದಡಿ ಮಸೀದಿ ಸದಸ್ಯರೊಬ್ಬರು ಮಸೀದಿಯ ಹಳೆಯ ಕಮಿಟಿಯ ಮೂವರು ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕುಕ್ಕಾಜೆ ಮೊಹಿಯುದ್ದೀನ್ ಜುಮಾ ಮಸೀದಿಯ ಸದಸ್ಯ ಅಬ್ದುಲ್ ರಝಾಕ್ ಇರಾ ಅವರು ಮಸೀದಿಯ ಹಳೆಯ ಕಮಿಟಿಯ ಸದಸ್ಯರಾದ ಇಸ್ಮಾಯಿಲ್, ಮುಹಮ್ಮದ್ ರಫೀಕ್ ಹಾಗೂ ಪಿ.ಕೆ ಹಸೈನಾರ್ ಎಂಬವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಗೆ ಈ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕುಕ್ಕಾಜೆ ಮೊಹಿಯುದ್ದೀನ್ ಜುಮಾ ಮಸೀದಿಯ ಶಾದಿಮಹಲ್ ನಿರ್ಮಾಣಕ್ಕೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ 50 ಲಕ್ಷ ರೂ. ಹಣ ಬಿಡುಗಡೆಯಾಗಿತ್ತು. ಈ ಪೈಕಿ 25 ಲಕ್ಷ ರೂ. ಹಣವನ್ನು ಮಸೀದಿಯ ಹಳೆಯ ಕಮಿಟಿಯ ಸದಸ್ಯರಾದ ಇಸ್ಮಾಯಿಲ್, ಮುಹಮ್ಮದ್ ರಫೀಕ್ ಹಾಗೂ ಪಿ.ಕೆ ಹಸೈನಾರ್ ಎಂಬವರು ದ.ಕ ಜಿಲ್ಲಾ ಪಂಚಾಯತ್ ಸಹಾಯಕ ಅಭಿಯಂತರರ ಸೀಲು ಹಾಗೂ ಸಹಿಯನ್ನು ನಕಲಿಯಾಗಿ ಸೃಷ್ಟಿಸಿರುತ್ತಾರೆ. ಬಳಿಕ ಪೋರ್ಜರಿ ದಾಖಲೆಗಳನ್ನು ಸಲ್ಲಿಸಿ ಹಣವನ್ನು ಬಿಡುಗಡೆಗೊಳಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಸೀದಿಯ ಸದಸ್ಯ ಅಬ್ದುಲ್ ರಝಾಕ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.