ಮಂಗಳೂರು, ಸೆ.11(DaijiworldNews/AA): ಆಟೋ ರಿಕ್ಷಾ ಅಪಘಾತದಲ್ಲಿ ತಾಯಿಯನ್ನು ರಕ್ಷಿಸಿದ ಬಾಲಕಿ ವೈಭವಿಯನ್ನು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ (ಡಿಸಿ) ಮುಲ್ಲೈ ಮುಗಿಲನ್ ಮತ್ತು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಂಗಳವಾರ ತಮ್ಮ ಕಚೇರಿಗೆ ಆಹ್ವಾನಿಸಿ ಗೌರವಿಸಿದ್ದಾರೆ.
ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ತನ್ನ ತಾಯಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದ ವೇಳೆ 7ನೇ ತರಗತಿ ವಿದ್ಯಾರ್ಥಿ ವೈಭವಿ ಅವರು ಕಾಪಾಡಿದ್ದರು. ವೈಭವಿ ಅವರ ಈ ಧೈರ್ಯವನ್ನು ಗುರುತಿಸಿ, ಜಿಲ್ಲಾಧಿಕಾರಿ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದ್ದಾರೆ. ಆಕೆಯ ಧೈರ್ಯವನ್ನು ಮೆಚ್ಚಿದ ಅವರು, ಅವರ ಈ ಕಾರ್ಯ ಅನುಕರಣೀಯ. ಅಂತಹ ಅರಿವು ಮತ್ತು ಶೌರ್ಯವನ್ನು ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ತುಂಬಬೇಕು ಎಂದು ಡಿಸಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಡಿಸಿ ಡಾ.ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ, ವೈಭವಿ ಪೋಷಕರು ಉಪಸ್ಥಿತರಿದ್ದರು.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವೈಭವಿಯ ಧೈರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ತಾಯಿ ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.