ಮಂಗಳೂರು, ಸೆ.10(DaijiworldNews/AK): ವಿಕೆ ಫರ್ನಿಚರ್ ಆಂಡ್ ಇಲೆಕ್ಟ್ರಾನಿಕ್ಸ್ ಆಯೋಜಿಸಿದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಆನ್ಲೈನ್ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ ರಾಧಾಕೃಷ್ಣ ಫೊಟೋ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಸಂಸ್ಥೆಯ ತೊಕ್ಕೊಟ್ಟು ಕಲ್ಲಾಪು ಮಳಿಗೆಯಲ್ಲಿ ನಡೆಯಿತು.
ಈ ವೇಳೆ ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸ್ಥಾಪಕ ವಾಲ್ಟರ್ ನಂದಳಿಕೆ ಅವರು ಮಾತನಾಡಿ, ಯಾವುದೇ ಉದ್ಯಮದಲ್ಲಿ ಉತ್ಪನ್ನಗಳಿಗೆ ಗ್ಯಾರಂಟಿ ಇದ್ದರೆ ಗ್ರಾಹಕರಿಗೆ ನಂಬಿಕೆ ಬರುತ್ತದೆ. ವಿಕೆ ಫರ್ನಿಚರ್ ಸಂಸ್ಥೆಯು ವಿಶ್ವಾಸಾರ್ಹ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವುದು ಅದರ ದೊಡ್ಡ ಮಟ್ಟದ ಯಶಸ್ಸಿಗೆ ಮುಖ್ಯ ಕಾರಣ. ಸಂಸ್ಥೆಯ ಮಾಲಕರು ಉದ್ಯಮದ ಜತೆಗೆ ಸಾಮಾಜಿಕ ಕಾಳಜಿಯನ್ನು ಹೊಂದಿದ್ದಾರೆ. ತನ್ನ ಸಂಸ್ಥೆಯಲ್ಲಿ 500 ಮಂದಿಗೆ ಉದ್ಯೋಗ ಒದಗಿಸಿದ್ದಾರೆ. ಎಂಟು ವರ್ಷಗಳ ಹಿಂದೆ ಸಣ್ಣ ಮಟ್ಟದಲ್ಲಿ ಸಂಸ್ಥೆಯನ್ನು ಆರಂಭಿಸಿ ಅವರು ಬೆಳೆದ ರೀತಿ ನಿಜಕ್ಕೂ ಒಂದು ದೊಡ್ಡ ಸಾಹಸದ ಕತೆ ಎಂದು ಅವರು ಹೇಳಿದರು.
ಚಲನಚಿತ್ರ ನಟ ಅರವಿಂದ ಬೋಳಾರ್ ಅವರು ಮಾತನಾಡಿ, ಗುಣಮಟ್ಟದ ಉತ್ಪನ್ನಗಳ ಮಾರಾಟ ಜತೆಗೆ ಮಕ್ಕಳ ಪ್ರತಿಭಾ ಪ್ರದರ್ಶನ ಕ್ಕೆ ಅವಕಾಶ ನೀಡುತ್ತಾ ಬರುತ್ತಿರುವ ಸಂಸ್ಥೆಯು ಸಮಾಜದ ಎಲ್ಲ ವರ್ಗದ ಜನರ ಪ್ರೀತಿ ಸಂಪಾದಿಸಿದೆ ಎಂದು ಶ್ಲಾಘಿಸಿದರು.
ಅನಾರ್ಕಲಿ ಸಿನಿಮಾ ನಟಿ ಮಧುರಾ ಆರ್.ಜೆ ಮಾತನಾಡಿ, 1800 ಸ್ಪರ್ಧಾಳುಗಳು ಎಂಟ್ರಿಯಾಗಿರುವುದೇ ವಿ.ಕೆ. ಸಂಸ್ಥೆಯ ಖ್ಯಾತಿಯನ್ನು ತೋರಿಸುತ್ತದೆ. ಸ್ಪರ್ಧೆಗೆ ಭಾಗವಹಿಸುವಿಕೆ ಮುಖ್ಯ. ಪ್ರತಿಭೆಗೆ ಪ್ರೋತ್ಸಾಹಿಸಿದಾಗ ಮಕ್ಕಳು ಇನ್ನಷ್ಟು ಬೆಳೆಯಲು ಸಾಧ್ಯ ಎಂದರು.
ಮಂಗಳೂರು ಮೇರಿ ಜಾನ್ ಖ್ಯಾತಿಯ ವಾಸಿಂ ಮತ್ತು ರಾಘವ ಅತಿಥಿಗಳಾಗಿದ್ದರು. ವಿಕೆ ಫರ್ನಿಚರ್ ಆಂಡ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಚೇರ್ಮನ್ ವಿಠಲ್ ಕುಲಾಲ್ ಕೊಣಾಜೆ, ನಿರ್ದೇಶಕಿ ವಿನುತಾ ವಿಠಲ್ ಕುಲಾಲ್, ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ನಿಶಾಂತ್ ರಾಜ್ ಸ್ವಾಗತಿಸಿದರು. ಪತ್ರಕರ್ತ ಚೇತನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಪ್ರಶಸ್ತಿ ವಿಜೇತ ಮಕ್ಕಳಿಗೆ ಸೈಕಲ್, ರೀಡಿಂಗ್ ಟೇಬಲ್, ಬುಕ್ ಶೆಲ್ಫ್ ಸೇರಿದಂತೆ ವಿವಿಧ ದೊಡ್ಡ ದೊಡ್ಡ ಗಾತ್ರಗಳ ಬಹುಮಾನಗಳನ್ನು ವಿತರಿಸಲಾಯಿತು. ದೂರದ ಉಡುಪಿ, ಕಾರ್ಕಳ, ಬೆಳ್ತಂಗಡಿ ಕಡೆಯಿಂದಲೂ ಸ್ಪರ್ಧಾಳುಗಳು ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡರು.