ಮಂಗಳೂರು ನ 28 : ಸ್ಮಾರ್ಟ್ಸಿಟಿ ಎಂದು ಘೋಷಿಸಲ್ಪಟ್ಟಿರುವ ಮಂಗಳೂರು ನಗರಕ್ಕೆ ಈ ಡಿಜಿಟಲ್ ಸರಕಾರಿ ಹೋರ್ಡಿಂಗ್ ಕಾಲಿಟ್ಟಿದ್ದೆ. ನಗರದ ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರದದ ಮುಂಭಾಗದಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಎಲ್ಇಡಿ ಫಲಕವನ್ನು ನ 28 ರ ಮಂಗಳವಾರ ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿ, ರಾಜ್ಯ ಸರಕಾರದ ವಿವಿಧ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ ಸೇರಿದಂತೆ ಪ್ರಮುಖ ಯೋಜನೆಗಳ ಬಗ್ಗೆ ಈ ಫಲಕದಲ್ಲಿ ಮಾಹಿತಿ ನೀಡಲಾಗುವುದು. ಇದಲ್ಲದೇ, ಸಂದರ್ಭಾನುಸಾರ ಆಯಾ ಕಾಲಕ್ಕೆ ತಕ್ಕಂತೆ ಮಾಹಿತಿಗಳನ್ನು ಪ್ರಸಾರ ಮಾಡಲಾಗುವುದು. ಸ್ಥಳೀಯವಾಗಿಯೂ ಜಿಲ್ಲೆಯ ಪ್ರಮುಖ ಕಾರ್ಯಕ್ರಮಗಳ ಬಗ್ಗೆಯೂ ಇದರಲ್ಲಿ ಮಾಹಿತಿ ನೀಡಲಾಗುವುದು ಎಂದರು.
ರಾಜ್ಯ ಸರಕಾರದ ವಿವಿಧ ಯೋಜನೆಗಳ ಮತ್ತು ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಜಿಟಲ್ ಎಲ್ಇಡಿ ಮಾದರಿಯ ಫಲಕವನ್ನು ಆಳವಡಿಸಿದೆ. ಹೀಗಾಗಿ ದೇಶದಲ್ಲೇ ಕರ್ನಾಟಕ ರಾಜ್ಯ ಸರಕಾರವು ಡಿಜಿಟಲ್ ಫಲಕಗಳನ್ನು ಸ್ಥಾಪಿಸಿದ ಮೊದಲ ರಾಜ್ಯವಾಗಿದೆ. ಈ ಡಿಜಿಟಲ್ ಫಲಕ ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. ಇದಕ್ಕಾಗಿ ದಿನವೊಂದಕ್ಕೆ 30 ಯುನಿಟ್ ವಿದ್ಯುತ್ ಶಕ್ತಿ ಅಗತ್ಯವಿದ್ದೂ ನಿರಂತರ ಇಂಟರ್ನೆಟ್ ಸಂಪರ್ಕವೂ ಇದರ ಕಾರ್ಯಾಚರಣೆಗೆ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್ ಮಾಹಿತಿ ನೀಡಿದರು .