ಮಂಗಳೂರು,ಮೇ 27(Daijiworld News/MSP): ಶ್ರೀಲಂಕಾದಿಂದ 15 ಐಎಸ್ ಐಎಸ್ ಭಯೋತ್ಪಾದಕರು ಲಕ್ಷದ್ವೀಪದ ಮಿನಿಕಾಯ್ ದ್ವೀಪ ದತ್ತ ತೆರಳುತ್ತಿದ್ದಾರೆ ಎಂಬ ಬೇಹುಗಾರಿಕೆ ಸಂಸ್ಥೆಗಳ ವರದಿಗಳ ಹಿನ್ನೆಲೆಯಲ್ಲಿ ಕೇರಳ ಮತ್ತು ಕರ್ನಾಟಕ ಕರಾವಳಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ ಕೇರಳ ಹಾಗೂ ಕರ್ನಾಟಕ ಕರಾವಳಿಯಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಈ ಹಿನ್ನಲೆಯಲ್ಲಿ ಭಾರತದ ಪಶ್ಚಿಮ ಕರಾವಳಿ ಉದ್ದಕ್ಕೂ ಪೊಲೀಸರು, ಕೋಸ್ಟ್ ಗಾರ್ಡ್, ನೌಕಾ ಪಡೆಯವರು ಕಣ್ಗಾವಲು ಇರಿಸಿದ್ದಾರೆ. ಲಕ್ಷದ್ವೀಪಕ್ಕೆ ಪ್ರಯಾಣಿಸುವ ಸಮುದ್ರ ಮಾರ್ಗದಲ್ಲಿ ಕರ್ನಾಟಕಕ್ಕೆ ನುಸುಳುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ ಈ ಹಿನ್ನಲೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರಿಗೂ ಸಂಶಯಾಸ್ಪದ ಬೋಟುಗಳು ಕಂಡು ಬಂದರೆ ತಕ್ಷಣ ಮಾಹಿತಿ ರವಾನಿಸುವಂತೆ ಸೂಚನೆ ನೀಡಿದ್ದಾರೆ.
ಉಗ್ರರು ಬಿಳಿ ಬಣ್ಣದ ದೋಣಿಯಲ್ಲಿ ಸಾಗುತ್ತಿದ್ದಾರೆ ಎಂದು ಬೇಹು ಮಾಹಿತಿಯಿದ್ದು ಕೊಚ್ಚಿಯ ದಕ್ಷಿಣ ನೌಕಾ ಪಡೆಯ ಜಂಟಿ ಆಪರೇಶನ್ ಸೆಂಟರ್ನಲ್ಲಿ ಸಂಭಾವ್ಯ ಉಗ್ರ ದಾಳಿಯನ್ನು ತಡೆಯಲು ಸಜ್ಜುಗೊಳಿಸಲಾಗಿದೆ, ಮಾತ್ರವಲ್ಲದೆ ಕರಾವಳಿ ಕಾವಲು ಪಡೆಯ ಪೊಲೀಸರು ಸಮುದ್ರದಲ್ಲಿ ಗಸ್ತು ತಿರುಗಲು ಪ್ರಾರಂಭಿಸಿದ್ದಾರೆ.