ಮಂಗಳೂರು, ಸೆ.5,(DaijiworldNews/TA):ಮುಂದೆ ಗಣೇಶನ ಹಬ್ಬ ಬರುವ ಸಮಯದಲ್ಲಿ ರಾಜ ಸರ್ಕಾರವು ರಾಜ್ಯದಲ್ಲಿ ವಿಘ್ನ ವಿನಾಯಕನಿಗೆ ವಿಘ್ನ ತರುವಂಥ ಕಾರ್ಯದಲ್ಲಿ ತೊಡಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳು ಸಿದ್ದತೆಯಲ್ಲಿ ತೊಡಗಿಕೊಂಡಿದೆ. ಆದರೆ ಸರಕಾರವು ಕಾರ್ಯಕ್ರಮದ ಆಯೋಜಕರಿಗೆ ಹೊಸ ನಿಯಮದ ಮೂಲಕ ಕಾರ್ಯಕ್ರಮಕ್ಕೆ ವಿಘ್ನ ತರುವ ಕಾರ್ಯ ಮಾಡುತ್ತಿದೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಮೊಬೈಲ್ ಸಂಖ್ಯೆ, ಹೆಸರುಗಳು ನೀಡುವಂತೆ ಒತ್ತಡ ಹೇರಲಾಗುತ್ತಿದೆ. ಅಲ್ಲದೆ ಶೋಭಾಯಾತ್ರೆಯಲ್ಲಿ ಯಾವ ರೀತಿಯ ಟ್ಯಾಬ್ಲೊ ಭಾಗವಹಿಸುತ್ತಿದೆ ಎಂದು ಅದರ ಪೂರ್ಣ ವಿವರ ನೀಡುವಂತೆ ಕೇಳಲಾಗುತ್ತಿದೆ.
ಇವೆಲ್ಲವನ್ನೂ ಅನುಮತಿಗೆ ಹೋಗುವ ಮುನ್ನವೇ ಕೇಳಲಾಗುತ್ತಿದೆ. ಈ ಮೂಲಕ ಹಬ್ಬ ಆಯೋಜಿಸುವ ಸಂಘಟಕರಲ್ಲಿ ಗೊಂದಲ ಸೃಷ್ಟಿಸುವ ಕೆಲಸವಾಗುತ್ತಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಹಿಂದೂ ಸಮಾಜದ ಬಾಂಧವರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಅಲ್ಲದೆ ಒಳ್ಳೆಯ ರೀತಿಯಲ್ಲಿ ಗಣಪತಿ ಹಬ್ಬವನ್ನು ಆಚರಿಸಲು ಸರ್ಕಾರ ಬಿಡುತ್ತಿಲ್ಲ ಎಂದು ಅವರು ಆರೋಪಿಸಿದರು.