ಕುಂದಾಪುರ, ಸೆ.4(DaijiworldNews/AA): ಕಂಡ್ಲೂರು ಸೇತುವೆ ಶಿಥಿಲಾವಸ್ಥೆ ತಲುಪಿರುವುದು 2017ರಲ್ಲಿಯೇ ದೃಢಪಟ್ಟಿದೆ. ಆದರೆ ಇನ್ನೂ ಕೂಡಾ ದುರಸ್ತಿಯಾಗಲಿ, ಬದಲಿ ಸೇತುವೆ ನಿರ್ಮಾಣದ ವಿಷಯವಾಗಲಿ ಮುನ್ನೆಲೆಗೆ ಬರುತ್ತಿಲ್ಲ. ಕುಂದಾಪುರ ಅಂಪಾರು ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ನಡುವಿನ ಸಂಪರ್ಕ ಸೇತುವೆ ಶಿಥಿಲಗೊಳ್ಳುತ್ತಿರುವ ಲಕ್ಷಣಗಳು ಕಂಡು ಬರುತ್ತಿದ್ದು ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿ ಬರುತ್ತಿದೆ.
ಹತ್ತು ವರ್ಷಗಳಿಂದ ಈ ಸೇತುವೆಯ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ಆಗಿದ್ದವು. ಕೊನೆಗೂ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ ಪರಿಶೀಲನೆ ನಡೆಸಿ ಸೇತುವೆ ಶಿಥಿಲಗೊಂಡಿರುವುದನ್ನು ದೃಢ ಪಡಿಸಿತ್ತು. ಈ ವರದಿ ಆಧರಿಸಿ ಲೋಕೋಪಯೋಗಿ ಇಲಾಖೆ 1.32ಕೋಟಿ ರೂಪಾಯಿಗಳ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕುಂದಾಪುರ ತಾಲೂಕು ಕೆಡಿಪಿ ಸಭೆಯಲ್ಲಿ ಕೆಡಿಪಿ ಸದಸ್ಯೆ ಜ್ಯೋತಿ ಪುತ್ರನ್ ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅವಘಡ ಸಂಭವಿಸುವ ಮೊದಲೆ ಎಚ್ಚೆತ್ತುಕೊಳ್ಳುವಂತೆ ಜ್ಯೋತಿ ಪುತ್ರನ್, ಜ್ಯೋತಿ ನಾಯಕ್ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಕುಂದಾಪುರ-ಅಂಪಾರು, ತೀರ್ಥಹಳ್ಳಿ-52 ರಾಜ್ಯ ಹೆದ್ದಾರಿಯಲ್ಲಿ ವಾರಾಹಿ ನದಿಗೆ ಅಡ್ಡಲಾಗಿ 1977ರಲ್ಲಿ ಅಂದಿನ ಶಾಸಕರಾಗಿದ್ದ ಯಡ್ತರೆ ಮಂಜಯ್ಯ ಶೆಟ್ಟಿಯವರ ಅವಧಿಯಲ್ಲಿ ನಿರ್ಮಾಣವಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಸರಕು ಸಾಗಾಟ ಮಾಡುವ ಘನ ವಾಹನಗಳು ಸೇರಿದಂತೆ ಪ್ರತಿ ನಿತ್ಯ ಈ ಸೇತುವೆಯ ಮೂಲಕ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಾಹನಗಳು ಸೇತುವೆ ಪ್ರವೇಶ ಮಾಡುತ್ತಲೇ ದಡಕ್ ದಡಕ್ ಶಬ್ದ ಆರಂಭವಾಗುತ್ತದೆ. ಬಿಮ್ಗಳ ನಡುವೆ ಅಂತರ ಉಂಟಾಗಿರುವುದರಿಂದ ಶಬ್ದ ಬರುತ್ತಿದ್ದು ಇದು ಹೀಗೆ ಮುಂದುವರಿದರೆ ಸೇತುವೆಯೂ ಸ್ಲಾಬ್ಗೂ ಕೂಡಾ ಹಾನಿಯಾಗಿದೆ.
300 ಮೀಟರ್ ಉದ್ದ, 7.5 ಮೀ ಅಗಲವಿರುವ ಈ ಸೇತುವೆ 2017ರ ಪರೀಶಿಲನೆಯ ಬಳಿಕ ಮತ್ತಷ್ಟು ಹದಗೆಟ್ಟಿದೆ. ಮತ್ತೆ ಸೇತುವೆಯ ಗುಣಮಟ್ಟವನ್ನು ಪರಿಶೀಲಿಸಬೇಕಾದ ಅಗತ್ಯತೆ ಕೂಡಾ ಇದೆ. ಸೇತುವೆಯ ಅಡಿ ಭಾಗ, ಫಿಲ್ಲರ್ಗಳ ಗುಣಮಟ್ಟ, ಜೋಡಣೆಯ ನಡುವೆ ಇರುವ ಅಂತರ, ಸೇತುವೆ ನಡುವೆ ಕಂದಕಗಳು ನಿರ್ಮಾಣವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕಂಡ್ಲೂರಿನಿಂದ ಇತ್ತ ಬರುವಾಗ ಪ್ರಥಮದಲ್ಲೇ ದೊಡ್ಡ ಕಬ್ಬಿಣದ ಬಿಮ್ ತೆರೆದುಕೊಂಡಿದೆ. ಇದು ಸಾಕಷ್ಟು ವರ್ಷಗಳಿಂದಲೂ ಹಾಗೆಯೇ ಇದೆ. ಇನ್ನೂ ಸೇತುವೆಯ ಕೆಲವು ಗಾರ್ಡ್ಗಳು ತುಂಡಾಗಿ ಹೋಗಿದ್ದು ದುರಸ್ತಿ ಕೂಡಾ ಆಗಿಲ್ಲ. 5 ವರ್ಷಗಳ ಹಿಂದೆಯೇ ಸೇತುವೆ ಗುಣಮಟ್ಟದ ಬಗ್ಗೆ ವರದಿ ನೀಡಿದರೂ ಕೂಡಾ ಇನ್ನೂ ಅದು ಹಾಗೆಯೇ ಉಳಿದುಕೊಂಡಿದೆ. ಹೀಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಹೀಗೆ ಮುಂದುವರಿದರೆ ಸೇತುವೆ ಮುರಿದು ಹೋದರೆ ಪರಿಸ್ಥಿತಿ ಊಹಿಸಿಕೊಳ್ಳುವುದು ಕಷ್ಟ. ಈ ಹಿಂದೆ ಬಾರಕೂರು ಬ್ರಹ್ಮಾವರ ಸೇತುವೆ ಹೀಗೆ ನಿರ್ಲಕ್ಷ್ಯದಿಂದ ಕುಸಿದಿತ್ತು. ಆಗ ಸಂಪರ್ಕಕ್ಕೆ ಎಷ್ಟು ಸಮಸ್ಯೆಯಾಗಿತ್ತು ಎಂದು ನೆನಪಿಸಿಕೊಳ್ಳಬಹುದು. ಅದೇ ರೀತಿ ಕಂಡ್ಲೂರು ಸೇತುವೆ ಆಗದಿರಲಿ.
ರಸ್ತೆ, ಸೇತುವೆಗಳ ಗುಣಮಟ್ಟವನ್ನು ಆಗಿಂದಾಗಿ ಪರಿಶೀಲನೆ ಮಾಡಿ ಸೂಕ್ತ ಕ್ರಮಗೊಳ್ಳಬೇಕಾದ ಇಲಾಖೆಗಳು, ಸರಕಾರಗಳು ಆದ್ಯತೆಯ ನೆಲೆಯಲ್ಲಿ ಒತ್ತು ಕೊಡದಿರುವುದು ಅನಾಹುತ ತಡೆಯುವ ಸಾಧ್ಯತೆ ಇದ್ದರೂ ಕೈಕಟ್ಟಿ ಕುಳಿತುಕೊಂಡಂತೆ ಆಗುತ್ತದೆ. ಕಂಡ್ಲೂರು ರಾಜ್ಯ ಹೆದ್ದಾರಿ ಬಹು ಮುಖ್ಯ ಸೇತುವೆಯಾದ್ದರಿಂದ ತಕ್ಷಣ ಕ್ರಮ ಕೈಗೊಳ್ಳಬೇಕಾದ ಇಲಾಖೆ ಮೀನ ಮೇಷ ಎಣಿಸುತ್ತಿರುವುದು ಮಾತ್ರ ದುರಂತವೇ ಸರಿ.