ಉಳ್ಳಾಲ, ಸೆ.4(DaijiworldNews/AA): ಬಸ್ಸಿನಲ್ಲಿ ಕುಸಿದುಬಿದ್ದು ಅಸ್ವಸ್ಥಗೊಂಡ ಮಹಿಳೆಯನ್ನು ನಾಟೆಕಲ್ ಕಣಚೂರು ಆಸ್ಪತ್ರೆಗೆ ಬಸ್ಸಿನಲ್ಲಿಯೇ ಕರೆತಂದು ಮಗದೊಮ್ಮೆ ಬಸ್ ಸಿಬ್ಬಂದಿ ಮಾನವೀಯತೆ ಮೆರೆದಿರುವ ಘಟನೆ ಸೆ.2 ರಂದು ನಡೆದಿದೆ.
ವಿಟ್ಲ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಮರ್ಸಿ ಟ್ರಾವೆಲ್ಸ್ ಬಸ್ಸಿನಲ್ಲಿ ಮುಡಿಪು ಟಿಕೆಟ್ ಪಡೆದುಕೊಂಡಿದ್ದ ಮಹಿಳೆ ಮುಡಿಪು ತಲುಪಿದರೂ ಇಳಿಯುವುದು ಕಾಣಲಿಲ್ಲ. ಇದರಿಂದ ನಿರ್ವಾಹಕ ಯಾಕೂಬ್ ಎಂಬವರು ಮಹಿಳೆ ಸಮೀಪ ತೆರಳಿದಾಗ ಸಹಪ್ರಯಾಣಿಕರೊಬ್ಬರು, ಆಕೆ ಅಸ್ವಸ್ಥಳಾಗಿ ಕುಸಿದುಬಿದ್ದರೆಂದು ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಚಾಲಕ ಸವಾದ್, ನಿರ್ವಾಹಕ ಯಾಕೂಬ್ 10 ಕಿ.ಮೀ ದೂರಕ್ಕೆ ಬಸ್ಸನ್ನು ತಂದು ನಾಟೆಕಲ್ ಕಣಚೂರು ಆಸ್ಪತ್ರೆಯೊಳಕ್ಕೆ ಕೊಂಡೊಯ್ದು ತುರ್ತು ನಿಗಾ ಘಟಕದಲ್ಲಿ ದಾಖಲಿಸಿದ್ದಾರೆ.
ಘಟನೆ ಕುರಿತ ವೀಡಿಯೋ ಕಣಚೂರು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮಹಿಳೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದಾಗಿ ಬಸ್ ಸಿಬ್ಬಂದಿ ತಿಳಿಸಿದ್ದಾರೆ.
ಮಂಗಳೂರು ನಗರದಲ್ಲಿ ಇದೇ ಮಾದರಿಯಲ್ಲಿ ಎರಡು ಘಟನೆಗಳು ಮಾನವೀಯತೆಗೆ ಸಾಕ್ಷಿಯಾಗಿದ್ದರೆ, ಉಡುಪಿಯಲ್ಲೂ ವಾರದ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ಇದೀಗ ಮುಡಿಪು ಭಾಗದಲ್ಲಿ ಖಾಸಗಿ ಬಸ್ ಸಿಬ್ಬಂದಿಯ ಕಾರ್ಯ ಎಲ್ಲರ ಶ್ಲಾಘನೆಗೆ ಕಾರಣವಾಗಿದೆ.