ಪುತ್ತೂರು, ಸೆ.4(DaijiworldNews/AA): ಉಪ್ಪಿನಂಗಡಿ ಹೊಸ ಬಸ್ ನಿಲ್ದಾಣದ ಬಳಿಯ ನೇತ್ರಾವತಿ ನದಿ ದಡದಲ್ಲಿ ಸೆ.3ರಂದು ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
ಮಂಗಳವಾರ ಸಂಜೆ ವೇಳೆ ನದಿಯ ಬದಿಯಲ್ಲಿ ಮೊಸಳೆಯೊಂದು ಮರಳ ದಿಬ್ಬದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಇಳಂತಿಲ ಗ್ರಾ.ಪಂ. ಮಾಜಿ ಸದಸ್ಯ, ಫಯಾಜ್ ಯು.ಟಿ. ಅವರು ಮೊಸಳೆಯನ್ನು ಗಮನಿಸಿದ್ದಾರೆ. ಈ ಮೊಸಳೆಯು ಸಾಕಷ್ಟು ದೊಡ್ಡದಾಗಿದ್ದು, ಅದರ ಫೋಟೋವನ್ನು ಸೆರೆಹಿಡಿದಿದ್ದಾರೆ.
ಕಳೆದ 2022ರ ಸೆಪ್ಟೆಂಬರ್ ನಲ್ಲಿ ಪಂಜಳದ ಪೆಟ್ರೋಲ್ ಪಂಪ್ ಸಮೀಪ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಕಾಣಿಸಿಕೊಂಡಿದ್ದವು. ಮಧ್ಯಾಹ್ನದ ವೇಳೆ ನದಿಯ ಮಧ್ಯದಲ್ಲಿರುವ ಮರಳ ದಿಬ್ಬದ ಮೇಲೆ ಮೊಸಳೆಗಳು ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂದಿತ್ತು. ಈ ಮೂರರಲ್ಲಿ ಒಂದು ಮೊಸಳೆ ದೊಡ್ಡ ಗಾತ್ರದಾದರೆ, ಇನ್ನೆರಡು ಮೊಸಳೆಗಳು ಅದಕ್ಕಿಂತ ಸ್ವಲ್ಪ ಸಣ್ಣ ಗಾತ್ರದ್ದಾಗಿದ್ದವು. ಆದರೆ, ಈ ಬಾರಿ ಒಂದೇ ಒಂದು ಮೊಸಳೆ ಕಾಣಿಸಿಕೊಂಡಿದ್ದು, ನೇತ್ರಾವತಿ ನದಿಯಲ್ಲಿ ಮೊಸಳೆಗಳು ವಾಸವಾಗಿವೆ ಎಂಬುದಕ್ಕೆ ಪುಷ್ಠಿ ನೀಡಿದೆ.
ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮದಿಂದ ಸುಮಾರು 500 ಮೀಟರ್ ದೂರದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಈ ಪ್ರದೇಶವು ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದ ಸಮೀಪದಲ್ಲಿದೆ, ಅಲ್ಲಿ ಪಿಂಡ ಪ್ರದಾನ ಕಾರ್ಯ, ತೀರ್ಥ ಸ್ನಾನಗಳು ನಿರಂತರ ನಡೆಯುತ್ತಿವೆ. ಇದೀಗ ಈ ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.