ಕುಂದಾಪುರ, ಸೆ.4(DaijiworldNews/AA): ದೇವಸ್ಥಾನಗಳ ಅಭಿವೃದ್ಧಿಗೆ, ನಿಧಿಗೆ ಶ್ರೀಮಂತರು ದೇಣಿಗೆ ನೀಡುವುದು ಸಾಮಾನ್ಯ. ಆದರೆ ಭಿಕ್ಷೆ ಬೇಡಿ ಬಂದ ಹಣದಲ್ಲಿ ಉಳಿತಾಯ ಮಾಡಿ ದೇವಸ್ಥಾನಕ್ಕೆ ದೇಣಿಗೆ ನೀಡುವುದು ಅಪರೂಪದ ಸಂಗತಿ. ಹೀಗೆ ಭಿಕ್ಷಾಟನೆ ಮೂಲಕ ಬಂದ ಹಣವನ್ನು ದಾನ ಮಾಡಿ ಔದಾರ್ಯ ಮೆರೆದವರು ಗಂಗೊಳ್ಳಿ ಕಂಚುಗೋಡು ನಿವಾಸಿ ಅಶ್ವತ್ಥಮ್ಮ.
ಅಶ್ವತ್ಥಮ್ಮ ಅವರು ಕುಂದಾಪುರದ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಭಿಕ್ಷೆ ಬೇಡಿ ಸಂಗ್ರಹಿಸಿದ 1.16 ಲಕ್ಷ ರೂ.ಗಳನ್ನು ದಾನವಾಗಿ ನೀಡಿದ್ದಾರೆ. ಶಬರಿಮಲೆಯ ಪರಮ ಭಕ್ತೆ ಆಗಿರುವ ಅಶ್ವತ್ಥಮ್ಮ ಅವರು, ಹೀಗೆ ಭಿಕ್ಷೆ ಬೇಡಿ ಬಂದ ಹಣವನ್ನು ಉಳಿಸಿ ದಾನ ಮಾಡುತ್ತಿರುವ ೭ನೇ ದೇವಸ್ಥಾನವಿದು. ಮೊದಲಿಗೆ ಅಶ್ವತ್ಥಮ್ಮ ಅವರು ತಮ್ಮ ಊರಿನ ಕಂಚುಗೋಡಿನ ದೇಗುಲಕ್ಕೆ 15 ಲಕ್ಷ ರೂ. ದೇಣಿಗೆ ನೀಡುವ ಮೂಲಕ ತಮ್ಮ ಈ ಕಾರ್ಯವನ್ನು ಪ್ರಾರಂಭಿಸಿದರು. ಬಳಿಕ ಆನೆಗುಡ್ಡೆ ಕುಂಭಾಶಿ ದೇವಸ್ಥಾನ, ಮಂಗಳಾದೇವಿ, ಬಪ್ಪನಾಡು, ಪೊಳಲಿ ದೇವಸ್ಥಾನಗಳಿಗೆ ತಲಾ 1.5 ಲಕ್ಷ ರೂ., ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ 1 ಲಕ್ಷ ರೂ.ಗಳನ್ನು ಭೋಜನ ನಿಧಿಗೆ ನೀಡಿದ್ದಾರೆ.
ಅಶ್ವತ್ಥಮ್ಮ ಅವರು ತನ್ನ ಪತಿ ಹಾಗೂ ಪುತ್ರ ಮೃತಪಟ್ಟ ಬಳಿಕ ಭಿಕ್ಷೆ ಬೇಡಲು ಪ್ರಾರಂಭಿಸುತ್ತಾರೆ. ಇನ್ನು ಅಶ್ವತ್ಥಮ್ಮ ಅವರು ಶಬರಿ ಮಲೆಯ ಭಕ್ತೆಯಾಗಿ ವರುಷವೂ ವ್ರತಧಾರಿಯಾಗಿ ಮಲೆಗೆ ಭೇಟಿ ನೀಡುತ್ತಾರೆ. ಅಲ್ಲಿನ ಪಂಪಾ ಕ್ಷೇತ್ರದಲ್ಲಿ ಅನ್ನದಾನಕ್ಕಾಗಿ 1 ಲಕ್ಷ ರೂ., ಪಂದಳ ಕ್ಷೇತ್ರಕ್ಕೆ ಅನ್ನದಾನಕ್ಕಾಗಿ 30 ಸಾವಿರ ರೂ.ಗಳನ್ನು ನೀಡಿದ್ದಾರೆ.
ಇನ್ನು ಇಲ್ಲಿಯವರೆಗೆ ಎಷ್ಟು ಹಣ ನೀಡಿರಬಹುದು ಎಂದು ಅಶ್ವತ್ಥಮ್ಮ ಅವರನ್ನು ಪ್ರಶ್ನಿಸಿದಾಗ ಆ ಲೆಕ್ಕದ್ದೇನೋ ಗೊತ್ತಿಲ್ಲ. ಅಷ್ಟಕ್ಕೂ ನಾನು ಕೊಟ್ಟದ್ದಲ್ಲ. ಸ್ವಾಮಿ ಪಡೆದದ್ದು. ಅವನಿಂದ ಪಡೆದದ್ದು ಅವನಿಗೇ ಅರ್ಪಣೆ ಎಂದು ಹೇಳುತ್ತಾರೆ. ಜೊತೆಗೆ ಕೋವಿಡ್ ಸಮಯದಲ್ಲಿ ದೇಶವು ಕೊರೊನಾದಿಂದ ಮುಕ್ತವಾಗಲಿ, ಶಬರಿಮಲೆಗೆ ಕವಿದಿರುವ ಕತ್ತಲು ದೂರವಾಗಲಿ ಎಂದು ಹರಕೆಯನ್ನೂ ಹೊತ್ತಿದ್ದರು.
ಅಶ್ವತ್ಥಮ್ಮ ಅವರು ತಮ್ಮ ಇಳಿ ವಯಸ್ಸಿನಲ್ಲೂ ಕರಾವಳಿಯ ನಾನಾ ದೇವಸ್ಥಾನಗಳ ಆವರಣಗಳಲ್ಲಿ ಮತ್ತು ಸಾಸ್ತಾನ ಟೋಲ್ಗೇಟ್ನಲ್ಲಿ ಜನರ ಮುಂದೆ ಕೈ ಚಾಚಿ ಭಿಕ್ಷೆ ಬೇಡುತ್ತಾರೆ. ಹೀಗೆ ಭಿಕ್ಷೆ ಬೇಡಿ ಬಂದ ಹಣದಲ್ಲಿ ತನ್ನ ವೈಯಕ್ತಿಕ ಖರ್ಚಿಗೆ ಬೇಕಾಗುವಷ್ಟು ಇಟ್ಟುಕೊಂಡು ಉಳಿದದ್ದನ್ನು ದಾನ ಮಾಡುತ್ತಿದ್ದಾರೆ. ಹೀಗೆ ಭಿಕ್ಷೆ ಬೇಡಿ ಬಂದ ಹಣವನ್ನು ಅಶ್ವತ್ಥಮ್ಮ ಅವರು ದೇವರಿಗೆ ನೀಡುವ ಮೂಲಕ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದ್ದಾರೆ.