ಉಡುಪಿ, ಸೆ.3(DaijiworldNews/AA): ಸಹಪಾಠಿಯೋರ್ವಳಿಗೆ ಮತಾಂತರವಾಗುವಂತೆ ಒತ್ತಾಯಿಸಿ ಕಿರುಕುಳ ನೀಡಿದ ಆರೋಪದ ಮೇಲೆ ವೈದ್ಯಕೀಯ ವಿದ್ಯಾರ್ಥಿ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಬಂಧಿತನನ್ನು ವೈದ್ಯಕೀಯ ವಿದ್ಯಾರ್ಥಿ ಮಹಮ್ಮದ್ ಡ್ಯಾನಿಷ್ ಖಾನ್ (27) ಎಂದು ಗುರುತಿಸಲಾಗಿದೆ.
ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್ ಮಣಿಪಾಲದಲ್ಲಿ ಸ್ನಾತಕೋತ್ತರ ವೈದ್ಯಕೀಯ ವ್ಯಾಸಾಂಗ ಮಾಡುತ್ತಿದ್ದನು. ಈ ವೇಳೆ ತನ್ನ ಜೊತೆ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿಯ ಜೊತೆ ಸ್ನೇಹ ಬೆಳಸಿದ್ದಾನೆ. ಇಬ್ಬರ ನಡುವೆ ಸ್ನೇಹ ಬೆಳೆದ ನಂತರ, ಪರಸ್ಪರ ಫೋನ್ ನಂಬರ್ ಬದಲಾಯಿಸಿಕೊಂಡಿದ್ದಾರೆ. ಮುಂದೆ, ಗೆಳೆತನ ಪ್ರೀತಿಗೆ ತಿರುಗಿದೆ. ಇವರಿಬ್ಬರೂ ಹೊರ ರಾಜ್ಯದವರಾಗಿದ್ದು, ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ.
ಆಗಸ್ಟ್ 31 ರಂದು ದಾಖಲಾದ ದೂರಿನ ಅನುಸಾರ, ಡ್ಯಾನಿಶ್ ಸಂತ್ರಸ್ತೆಗೆ ಮದುವೆಯ ಪ್ರಸ್ತಾಪವನ್ನು ಇಟ್ಟಿದ್ದು, ಮದುವೆಗೆ ಷರತ್ತಿನಂತೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಇನ್ನು ಇದೇ ಜನವರಿ 22ರಂದು ನಡೆದ ಸಂಭಾಷಣೆಯ ಸಂದರ್ಭದಲ್ಲಿ ಹಿಂದೂ ಧರ್ಮ, ರಾಮ ಮಂದಿರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ ಎಂದು ತಿಳಿಸಿದ್ದಾರೆ.
ಬಳಿಕ ಇದೇ ಮಾರ್ಚ್ 11ರಂದು ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್, ಸಂತ್ರಸ್ತೆ ರೂಂಗೆ ಭೇಟಿ ನೀಡಿದ್ದಾನೆ. ಈ ವೇಳೆ ಪ್ರೇಯಸಿಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಆಗ ಪ್ರೇಯಸಿ ನಿರಾಕರಿಸಿದಾಗ ಆರೋಪಿಯು ಆಕೆಯ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದು ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಜೊತೆಗೆ ದೇಹದ ಖಾಸಗಿ ಭಾಗವನ್ನು ಸ್ಪರ್ಶಿಸಿ ಲೈಂಗಿಕ ಬೇಡಿಕೆಗಳನ್ನು ಮುಂದಿಟ್ಟಿದ್ದಾನೆ. ನಿರಂತರವಾಗಿ, ಪೋನ್ನಲ್ಲಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ ಎಂದು ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.
ಆರೋಪಿ ಮಹಮ್ಮದ್ ಡ್ಯಾನಿಷ್ ವಿರುದ್ಧ ಸಂತ್ರಸ್ತೆ ದೂರು ನೀಡಿದ ತಕ್ಷಣ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್ಗೆ ನ್ಯಾಯಾಂಗ ಬಂಧನ ವಿಧಿಸಿದೆ.