ಉಡುಪಿ, ಸೆ.3(DaijiworldNews/AA): ಬ್ರಹ್ಮಾವರ ಮತ್ತು ಉಡುಪಿಯಲ್ಲಿ ಎರಡು ಪ್ರತ್ಯೇಕ ಸೈಬರ್ ವಂಚನೆ ಪ್ರಕರಣಗಳು ವರದಿಯಾಗಿದ್ದು, ಒಟ್ಟು 25 ಲಕ್ಷಕ್ಕೂ ಅಧಿಕ ಆರ್ಥಿಕ ನಷ್ಟವಾಗಿದೆ.
ಮೊದಲ ಪ್ರಕರಣದಲ್ಲಿ ಬ್ರಹ್ಮಾವರದ ವರಂಬಳ್ಳಿ ಗ್ರಾಮದ ಅಲಿಶಾ (26) ಎಂಬುವವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಲಾಗಿದೆ. ಮೇ 29 ರಿಂದ ಆಗಸ್ಟ್ 16 ರ ನಡುವೆ, ಆರೋಪಿಯ ಖಾತೆಗೆ ದೂರುದಾರರು 8,96,448 ರೂ. ವರ್ಗಾಯಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂಗೆ ದೂರು ದಾಖಲಿಸಲು ವೆಬ್ಸೈಟ್ ಸಂಪರ್ಕಿಸಿದಾಗ ಅದರಲ್ಲಿಯೂ 37,000 ರೂ. ಆನ್ ಲೈನ್ ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ಪ್ರಕರಣದಲ್ಲಿ ಉಡುಪಿಯ ಬೈಲಕೆರೆಯ ಎಸ್.ಅಬ್ದುಲ್ ರಹೀಮನ್ ಸಾಹೇಬ್ (67) ಅವರಿಗೆ ಷೇರು ಮಾರುಕಟ್ಟೆಯ ಲಾಭಾಂಶಗಳ ಆಮಿಷ ತೋರಿಸಿ ಲಕ್ಷಾಂತರ ರೂ. ವಂಚಿಸಲಾಗಿದೆ. ಅಬ್ದುಲ್ ರಹೀಮನ್ ಅವರು ಷೇರು ಮಾರುಕಟ್ಟೆಯ ಬಗ್ಗೆ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಸರ್ಚ್ ಮಾಡುತ್ತಿದ್ದಾಗ, "ಮಾರ್ವಾಲ್ ಸ್ಟಾಕ್ ಕೆ6" ಎಂಬ ವಾಟ್ಸಾಪ್ ಗ್ರೂಪ್ ಲಿಂಕ್ ದೊರೆತಿದೆ. ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಷೇರು ಮಾರುಕಟ್ಟೆಯ ಬಗ್ಗೆ ಹಾಗೂ ಲಾಭಾಂಶಗಳ ಮಾಹಿತಿ ನೀಡಿದ್ದ. ಅದನ್ನು ನಂಬಿದ ಅವರು ಜುಲೈ 24 ರಿಂದ ಆಗಸ್ಟ್ 26 ರ ನಡುವೆ ಹಂತ ಹಂತವಾಗಿ 16,10,000 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದಾರೆ. ಬಳಿಕ ಆರೋಪಿಯು ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶವನ್ನಾಗಲಿ ನೀಡದೆ ವಂಚಿಸಿದ್ದಾನೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಎರಡೂ ಪ್ರಕರಣಗಳು ತನಿಖೆ ಹಂತದಲ್ಲಿದ್ದು, ಆನ್ಲೈನ್ ವಂಚನೆಗಳ ಬಗ್ಗೆ ಜಾಗರೂಕರಾಗಿರಲು ಅಧಿಕಾರಿಗಳು ತಿಳಿಸಿದ್ದಾರೆ.