ಉಡುಪಿ, ಸೆ.2(DaijiworldNews/AA): ಇ-ಸಿಗರೇಟ್ ಮಾರಾಟ ಮಾಡಲು ನಿಷೇಧ ಹೇರಲಾಗಿದೆ. ಆದಗ್ಯೂ ಮಣಿಪಾಲ ಭಾಗದಲ್ಲಿ ಮತ್ತೆ ಇ-ಸಿಗರೇಟ್ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯ ಬದಿ ಇರುವ ಅಂಗಡಿಯಲ್ಲಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಕಾಸರಗೋಡು ಮೂಲದ ಮೊಹಮ್ಮದ್ ಉನೈಶ್(25) ಹಾಗೂ ಸಾವಿರಾರು ರೂ.ಮೌಲ್ಯದ ಇ-ಸಿಗರೇಟ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದು ಆರೋಪಿಯನ್ನು ವಿಚಾರಣೆ ನಡೆಸಿದ ವೇಳೆ ಆತ ಮತ್ತೋರ್ವನೊಂದಿಗೆ ಸೇರಿಕೊಂಡು ಈ ವ್ಯವಹಾರ ಮಾಡುತ್ತಿರುವುದಾಗಿ ಹೇಳಿದ್ದಾನೆ.
ನಿಷೇಧಿತ ಇ-ಸಿಗರೇಟ್ಗಳನ್ನು ಮುಂಬೈಯಿಂದ ಖರೀದಿ ಮಾಡುತ್ತಿದ್ದರು. ಹೀಗೆ ಖರೀದಿಸಿದ ಇ-ಸಿಗರೇಟ್ಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕೂಲ್ ಡ್ರಿಂಕ್ಸ್, ಪಫ್ಯೂರ್ಮ್, ಲೈಟರ್ಗಳಂತಹ ವಸ್ತುಗಳನ್ನು ಮುಂಬೈಯಿಂದ ಬಸ್ ಹಾಗೂ ರೈಲು ಮಾರ್ಗದ ಮೂಲಕ ಉಡುಪಿ ಜಿಲ್ಲೆಗೆ ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಕೋವಿಡ್ ಸಮಯದಲ್ಲಿ ಮಣಿಪಾಲದ ವ್ಯಾಪ್ತಿಯ ಕೆಲವೊಂದು ಅಂಗಡಿಗಳಲ್ಲಿ ಇ-ಸಿಗರೇಟ್ಗಳನ್ನು ಹೆಚ್ಚಾಗಿ ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ಮಣಿಪಾಲ ಪೊಲೀಸರು ನಿರಂತರ ದಾಳಿ ನಡೆಸಿದ ಪರಿಣಾಮ ಇ-ಸಿಗರೇಟ್ ಮಾರಾಟ ಅಂಗಡಿಗಳಲ್ಲಿ ಇರಲಿಲ್ಲ. ಸದ್ಯ ಮತ್ತೆ ಇ-ಸಿಗರೇಟ್ ಮಾರಾಟ ಜಾಲ ಪತ್ತೆಯಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.