ಮಂಗಳೂರು, ಸೆ.2(DaijiworldNews/AA): ಕೊಂಕಣಿ ಲೇಖಕಿ ಲವಿ ಗಂಜಿಮಠ ಅವರಿಗೆ 'ರಾಕ್ಣೊ ಸಾಹಿತ್ಯ ಪ್ರಶಸ್ತಿ 2024' ಹಾಗೂ ಬಜೆಧರ್ಮ ಕೇಂದ್ರದ 'ಆಪ್ಟೆಂ ಶೆತ್' ಎಂಬ ಪತ್ರಿಕೆಗೆ 'ಧರ್ಮಕೇಂದ್ರದ ಅತ್ಯುತ್ತಮ ಪತ್ರಿಕೆ 2024' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮಂಗಳೂರು ಧರ್ಮಾಧ್ಯಕ್ಷರ ನಿವಾಸದ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ, ಮಂಗಳೂರು ಬಿಷಪ್ ಅ.ವಂ. ಡಾ.ಪೀಟರ್ ಪೌಲ್ ಸಲ್ಡಾನ್ಹಾ ಪ್ರಶಸ್ತಿ ಪ್ರದಾನ ಮಾಡಿದರು. 'ರಾಕ್ಣೊ' ವಾರಪತ್ರಿಕೆಯ ಸಂಪಾದಕ ವಂ. ರೂಪೇಶ್ ಮಾಡ್ತಾ ಪ್ರಶಸ್ತಿಯ ಕುರಿತು ವಿವರಣೆ ನೀಡಿದರು. ಡಾ.ಎಡ್ವರ್ಡ್ ನಬ್ರೆತ್ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು.
ಕೊಂಕಣಿ ಲೇಖಕರ ಸಮಾವೇಶದಲ್ಲಿ ಕವಿ ಆಂಡ್ರ್ಯೂ ಎಲ್. ಡಿ'ಕುನ್ಹಾ ಕವಿತೆ ಮತ್ತು ಕಾವ್ಯಾತ್ಮಕ ಬದುಕು ಎಂಬ ಬಗ್ಗೆ ಪ್ರಶಸ್ತಿ ಪುರಸ್ಕೃತ ಲವಿ ಗಂಜಿಮಠ ಪತ್ರಿಕೆಯನ್ನು ಸಂಪಾದಿಸುವ ಬಗ್ಗೆ 'ನಮಾನ್ ಬಾಳಕ್ ಜೆಜು' ಪತ್ರಿಕೆಯ ಸಂಪಾದಕ ವಂ. ಐವನ್ ಡಿಸೋಜ ಓದುಗರ ಪತ್ರವನ್ನು ಬರೆಯುವ ಕುರಿತು ಮಾತನಾಡಿದರು. ಬಳಿಕ ವಂ. ರೂಪೇಶ್ ಮಾಡ್ತಾ ಸಂವಾದ ನಡೆಸಿಕೊಟ್ಟರು. ಎಲ್ಲಾ ಅತಿಥಿಗಳಿಗೆ ಹಾಗೂ ಭಾಷಣಕಾರರಿಗೆ ನೆನಪಿನ ಕಾಣಿಕೆಯಾಗಿ ಪುಸ್ತಕವನ್ನು ನೀಡಲಾಯಿತು.
ಸಂಪಾದಕ ಮಂಡಳಿಯ ಸದಸ್ಯ ಫ್ರಾನ್ಸಿಸ್ ಡಿ'ಕುನ್ಹಾ ಕಾರ್ಯಕ್ರಮ ನಿರೂಪಿಸಿದರು. ಸಂಪಾದಕ ಮಂಡಳಿಯ ಸದಸ್ಯರಾದ ಪ್ರಮೋದ್ ಹೊಸ್ಪೆಟ್, ಡಾ. ಎಡ್ವರ್ಡ್ ನಬ್ರೆತ್ ಮತ್ತಿತರರು ಸಹಕರಿಸಿದರು. ಹಿರಿಯ ಸಾಹಿತಿ ವಂ. ಅಲ್ಲೋನ್ಸ್ ಡಿಲೀಮಾ, ಡಾಲ್ಪಿ ಕಾಸ್ಸಿಯ, ಹೆಚ್ಆರ್ ಆಳ್ವ ಮತ್ತಿತರರು ಪಾಲ್ಗೊಂಡಿದ್ದರು.