ಬಂಟ್ವಾಳ, ಸೆ.1(DaijiworldNews/AA): ಲಾರಿ ಮತ್ತು ಕಾರು ಮುಖಾಮುಖಿ ಢಿಕ್ಕಿಯಾಗಿ ಕಾರು ಚಾಲಕನಿಗೆ ಗಂಭೀರ ಗಾಯವಾದ ಘಟನೆ ಮೆಲ್ಕಾರ್-ಮುಡಿಪು ರಸ್ತೆಯ ಮಾರ್ನಬೈಲ್ ಎಂಬಲ್ಲಿ ಶನಿವಾರ ಸಂಭವಿಸಿದೆ.
ಅಪಘಾತದಲ್ಲಿ ಕಾರು ಚಾಲಕ ಬೋಳಂಗಡಿ ನಿವಾಸಿ ಮುಸ್ತಫಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಡಿಪು ಕಡೆಗೆ ಸಿಮೆಂಟ್ ಚೀಲಗಳನ್ನು ಸಾಗಿಸುತ್ತಿದ್ದ ಲಾರಿಯು ವಿರುದ್ಧ ದಿಕ್ಕಿನಿಂದ ಮೆಲ್ಕಾರ್ ಕಡೆಗೆ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಯು-ಟರ್ನ್ ಆಗಿದ್ದು, ಪೂರ್ತಿ ಜಖಂಗೊಂಡಿದೆ.
ಇನ್ನು ಲಾರಿಯ ಮುಂಭಾಗ ಜಖಂಗೊಂಡಿದ್ದು, ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.