ಕುಂದಾಪುರ, ಆ.31(DaijiworldNews/AK):ಪಕ್ಷದ ವ್ಯವಸ್ಥೆಯಲ್ಲಿ ಸದಸ್ಯರ ನೋಂದಣಿ, ನವೀಕರಣ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವುದೆ. ದೇಶದಲ್ಲಿ 10 ಕೋಟಿ ಸದಸ್ಯರ ಗುರಿ, ರಾಜ್ಯದಲ್ಲಿ 1.5ಕೋಟಿ ಸದಸ್ಯರನ್ನು ನೊಂದಾಯಿಸುವ ಗುರಿಯನ್ನು ನೀಡಲಾಗಿದೆ. ಕುಂದಾಪುರ ಕ್ಷೇತ್ರ ಪಕ್ಷ ನೀಡಿದ ಜವಬ್ದಾರಿಗಳನ್ನು ಹಿಂದಿನಿಂದಲೂ ಕೂಡಾ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದೆ. ಕಳೆದ 24 ವರ್ಷಗಳಿಂದ ಶಾಸಕರಾಗಿ ಸೇವೆ ಸಲ್ಲಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟರು ಎಲ್ಲರನ್ನು ವಿಶ್ವಾಸದಿಂದ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದವರು. ಹಾಗಾಗಿ ಕುಂದಾಪುರ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಾಗಲಿ, ಪಕ್ಷದ ಜವಬ್ದಾರಿಗಳು ಸಮರ್ಪಕವಾಗಿ ನಡೆಯಲು ಸಾಧ್ಯವಾಗಿದೆ. ಈ ಬಾರಿ ಪಕ್ಷ ನೀಡಿದ ಗುರಿಯನ್ನು ತಲುಪಲು ಎಲ್ಲರೂ ಒಂದಾಗಿ ಶ್ರಮಿಸೋಣ, ದಾಖಲೆಯ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಾಯಿಸೋಣ ಎಂದು ಕುಂದಾಪುರ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಕುಂದಾಪುರ ಮಂಡಲ ಬಿಜೆಪಿ ಕಛೇರಿಯಲ್ಲಿ ನಡೆದ ಸದಸ್ಯತ್ವ ನೋಂದಣಿ ಅಭಿಯಾನ ಪೂರ್ವಭಾವಿ ಸಭೆ ಹಾಗೂ ಪುರಸಭೆ, ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸದಸ್ಯತ್ವ ನೊಂದಣಿಯ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಸದಸ್ಯತ್ವ ಅಭಿಯಾನದ ಜಿಲ್ಲಾ ಪ್ರಮುಖರಾದ ರಾಘವೇಂದ್ರ ಕುಂದರ್ ಮಾಹಿತಿ ನೀಡುತ್ತಾ, ಬಿಜೆಪಿಯಲ್ಲಿ ಸದಸ್ಯತ್ವ ಶಾಶ್ವತವಲ್ಲ, ಪ್ರತೀ ಐದು ವರ್ಷಗಳಿಗೊಮ್ಮೆ ಪುನಃದಾಖಲಿಸುವ ಪ್ರಕ್ರಿಯೆ ನಡೆಯುತ್ತದೆ. ಸಾಮಾನ್ಯ ಸದಸ್ಯ ಹಾಗೂ ಸಕ್ರಿಯ ಸದಸ್ಯ ಎನ್ನುವ ಎರಡು ಹಂತದಲ್ಲಿ ಈ ನೊಂದಣಿ ನಡೆಯುತ್ತದೆ. ಪಕ್ಷದ ವಿಚಾರ ವಿಸ್ತಾರಕ್ಕೆ ಇದು ಉತ್ತಮ ಮಾರ್ಗವಾಗಿದೆ. ಸೆ.2ರಿಂದ ಸೆ.25ರ ತನಕ ಸದಸ್ಯತ್ವ ಅಭಿಯಾನ ನಡೆಯುತ್ತದೆ. ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅಭಿಯಾನ ಎಂದು ಹೆಸರಿಡಲಾಗಿದೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಅಂಗವಾಗಿ ಸೆ.11ರಿಂದ 17ರ ತನಕ ಮಹಾ ಅಭಿಯಾನ ನಡೆಸಲಾಗುವುದು. ಪ್ರತೀ ಬೂತಿಗೆ 300 ಸದಸ್ಯರನ್ನು ನೊಂದಾಯಿಸುವ ಗುರಿ ನೀಡಲಾಗಿದೆ. ಕುಂದಾಪುರ ಮಂಡಲದ 222 ಬೂತ್ನಲ್ಲಿ ಒಟ್ಟು 66,600 ಸದಸ್ಯರನ್ನು ನೊಂದಾಯಿಸುವ ಗುರಿ ಇದೆ. ಅಕ್ಟೋಬರ್ 1ರಿಂದ 15ರ ತನಕ ಎರಡನೇ ಹಂತದ ಸದಸ್ಯತ್ವ ನೊಂದಣಿ ಅಭಿಯಾನ ನಡೆಯಲಿದೆ, ಈ ಬಾರಿಯೂ ಮಿಸ್ಡ್ ಕಾಲ್ ಕೊಡುವ ಮೂಲಕ ನೊಂದಣಿ ನಡೆಯುತ್ತದೆ. ಮಿಸ್ಡ್ ಕಾಲ್ ಕೊಟ್ಟೊಡನೆ ಒಂದು ಲಿಂಕ್ ಬರುತ್ತದೆ. ಆ ಲಿಂಕ್ ತೆರೆದಾಗ ಅಪ್ಲೀಕೇಶನ್ ಒಪನ್ ಆಗುತ್ತದೆ. ಅದಕ್ಕೆ ಪೋಟೋದ ಜೊತೆಯಲ್ಲಿ ಕೇಳಿರುವ ಮಾಹಿತಿ ನೀಡಬೇಕು ಎಂದರು.
ಕುಂದಾಪುರ ಮಂಡಲದ ಅಧ್ಯಕ್ಷರಾದ ಸುರೇಶ ಶೆಟ್ಟಿ ಗೋಪಾಡಿ ಮಾತನಾಡಿ ರಾಷ್ಟ್ರದಲ್ಲಿ ಮೂರನೇ ಬಾರಿಗೆ ಸದಸ್ಯತ್ವ ನೊಂದಣಿ ಅಭೀಯಾನ ನಡೆಯುತ್ತಿದೆ. ರಾಜ್ಯದಲ್ಲಿ ಒಂದುವರೆಬ ಕೋಟಿ ಸದಸ್ಯರನ್ನು ನೊಂದಾಯಿಸುವ ಗುರಿ ನೀಡಿದ್ದು ಕುಂದಾಪುರದ 52 ಶಕ್ತಿ ಕೇಂದ್ರದ ಮೂಲಕ ಯಶಸ್ವಿ ಅನುಷ್ಠಾನ ಆಗಬೇಕು. ಕಳೆದ ಬಾರಿಗಿಂತ ಹೆಚ್ಚಿನ ಸದಸ್ಯರನ್ನು ನೊಂದಾಯಿಸುವ ಕೆಲಸ ನಮ್ಮಿಂದಾಗಬೇಕು ಎಂದರು.
ಮಂಡಲದ ನಿಕಟಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ, ಸದಸ್ಯತ್ವ ನೊಂದಣಿ ಅಭಿಯಾನದ ತಾಲೂಕು ಸಂಚಾಲಕರಾದ ಕಾಡೂರು ಸುರೇಶ ಶೆಟ್ಟಿ, ಸಹ ಸಂಚಾಲಕರಾದ ಸದಾನಂದ ಬಳ್ಕೂರು, ರೂಪ ಪೈ, ರಾಜೇಶ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಎಸ್.ಬಿಲ್ಲವ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಮಂಡಲದ ಪ್ರಧಾನ ಕಾರ್ಯದರ್ಶಿ ಸುದೀರ್ ಕೆ.ಎಸ್ ಸ್ವಾಗತಿಸಿದರು. ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಸತೀಶ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ಬಳ್ಕೂರು ವಂದಿಸಿದರು.