ಮಂಗಳೂರು, ಆ.30(DaijiworldNews/AA): ಯುವತಿಯೊಬ್ಬಳಿಗೆ ಯುವಕರ ತಂಡವೊಂದು ಕಿರುಕುಳ ನೀಡಿ ಹಲ್ಲೆ ನಡೆಸಿರುವ ಘಟನೆಯೊಂದು ಮಂಗಳೂರು ನಗರದಲ್ಲಿ ವರದಿಯಾಗಿದೆ. ಆದರೆ, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲವ ಎನ್ನುವ ಗಂಭೀರ ಆರೋಪ ಕೂಡಾ ಕೇಳಿ ಬಂದಿದೆ.
ಮಂಗಳೂರು ಲಾಲ್ ಭಾಗ್ ಬಳಿಯ ಪ್ರತಿಷ್ಠಿತ ಹೋಟೆಲ್ ಗೆ ತನ್ನ ಆತ್ಮೀಯರೊಂದಿಗೆ ಆಗಸ್ಟ್ 25ರಂದು ಯುವತಿ ತೆರಳಿದ್ದರು. ಯುವತಿಯು ಹೋಟೆಲ್ ಶೌಚಾಲಯ ಬಳಸುವುದಕ್ಕಾಗಿ ತೆರಳಿದಂತಹ ಸಂದರ್ಭದಲ್ಲಿ ಯುವಕನೋರ್ವ ಮಹಿಳೆಯರ ಶೌಚಾಲಯದಲ್ಲಿದ್ದ. ಅಲ್ಲಿಂದ ಹೊರ ಬಂದ ಯುವಕರು ಯುವತಿಯ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿದ್ದಾರೆಂದು ದೂರಲಾಗಿದೆ.
ಈ ಬಗ್ಗೆ ಯುವತಿ ತಕ್ಷಣವೇ ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿ, ಯುವಕರನ್ನು ಪ್ರಶ್ನಿಸಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡದ ಯುವಕರ ಗುಂಪು ಅಲ್ಲಿಂದ ಕಾಲ್ಕಿತ್ತಿದ್ದರು ಎನ್ನಲಾಗಿದೆ. ಇದಾದ ಬೆನ್ನಲ್ಲೇ ಪಾರ್ಕಿಂಗ್ ಬಳಿ ಯುವತಿಯ ಕಾರಿನ ಹಿಂಭಾಗ ಬೈಕ್ ವೊಂದನ್ನು ಅದೇ ಯುವಕರು ಅಡ್ಡವಿರಿಸಿದ್ದರು. ಕಾರನ್ನು ಹಿಂದೆ ತೆಗೆಯುವಾಗ ಬೈಕ್ ಗೆ ತಾಗಿದ್ದು, ಇದೇ ವಿಚಾರವಾಗಿ ಯುವಕರು ಗಲಾಟೆ ನಡೆಸಲು ಮುಂದಾಗಿದ್ದಾರೆ. ಯುವತಿಯ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯ ಜೊತೆಯಲ್ಲಿ ಯುವಕರ ಗುಂಪು ರಂಪಾಟ ನಡೆಸಿದ ಸಂದರ್ಭದಲ್ಲಿ ಏಕಾಏಕಿ ಸ್ಥಳದಲ್ಲಿ 20ಕ್ಕೂ ಹೆಚ್ಚು ಯುವಕರು ಜಮಾಯಿಸಿದ್ದಾರೆ. ಕಾರು ಚಾಲಕ ಹಾಗೂ ಯುವತಿಯ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿದೆ ಎಂದು ಆರೋಪಿಸಲಾಗಿದೆ.
ಯುವತಿಯ ಕಪಾಳಕ್ಕೂ ಬಾರಿಸಿ, ಜೀವಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಯುವತಿ ಆ. 25ರಂದು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ. ಆದರೆ, ದೂರು ನೀಡಿ ಕೆಲವು ದಿನವಾದರೂ ಕೂಡಾ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಲಾಗಿದೆ. ಪ್ರತಿಷ್ಠಿತ ಹೋಟೆಲ್ ಆದರೂ ಕೂಡಾ ಪಾರ್ಕಿಂಗ್ ಪ್ರದೇಶದ ಸಿಸಿಟಿವಿ ದೃಶ್ಯವಿಲ್ಲವೆಂದು ಹೋಟೆಲ್ ನಿರ್ಲಕ್ಷ್ಯವಹಿಸಿದರೆ, ಅದೇ ಸಬೂಬು ನೀಡಿ ಪೊಲೀಸ್ ಇಲಾಖೆ ಪ್ರಕರಣದ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಇನ್ನು, ಈ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಇದೇ ಕಾರಣಕ್ಕೆ ಆರೋಪಿಗಳ ವಿರುದ್ದ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲು ಮೀನಾಮೇಷವೆಣಿಸುತ್ತಿದೆ ಎಂದು ಆರೋಪಿಸಲಾಗಿದೆ.