ಉಡುಪಿ, ಆ.30(DaijiworldNews/AA): ನಗರದ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾದ, ಸ್ವಾತಂತ್ರ್ಯ ಪೂರ್ವದಲ್ಲಿ ಸಬ್ ಜೈಲ್ ಆಗಿದ್ದ ಹಳೆ ತಾಲೂಕು ಕಚೇರಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬ್ರಿಟಿಷರ ಆಳ್ವಿಕೆ ಇದ್ದ 1906ರಲ್ಲಿ ನಿರ್ಮಾಣವಾ ಗಿದ್ದ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡ ಮಾನ್ಯತೆಯೊಂದಿಗೆ ಉಳಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿದೆ. ಇದೀಗ ಕಟ್ಟಡವನ್ನು ನೆಲಸಮ ಗೊಳಿಸುವ ನಿಟ್ಟಿನಲ್ಲಿ ಅದರ ಹಂಚುಗಳನ್ನು ತಗೆಯುವ ಕಾರ್ಯ ಆರಂಭಗೊಂಡಿದೆ. ಈ ಜಾಗದಲ್ಲಿ ಇನ್ನು ನಗರಸಭೆಯ ಹೊಸ ಕಟ್ಟಡ ನಿರ್ಮಾಣವಾಗಲಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ಉಡುಪಿ ನಗರದಲ್ಲಿರುವ ವಿರಳ ಪಾರಂಪರಿಕ ಕಟ್ಟಡಗಳಲ್ಲಿ ಇದೂ ಒಂದು. ಸಣ್ಣ ಕೆಂಪು ಇಟ್ಟಿಗೆಗಳನ್ನು ಬಳಸಿ, ಮದ್ರಾಸ್ ರೂಫಿಂಗ್ ಮಾದರಿಯಲ್ಲಿ ನಿರ್ಮಿಸಿದ ಕಟ್ಟಡ ಇದಾಗಿದೆ. ನಿರ್ಮಾಣದ ಆರಂಭದಲ್ಲಿ ಈ ಕಟ್ಟಡದಲ್ಲಿ ಕೋರ್ಟ್ ಕಲಾಪಗಳು ನಡೆಯುತ್ತಿದ್ದವು ಮತ್ತು ಜೈಲು ಕೂಡಾ ಇಲ್ಲೇ ಇತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಹಲವರು ಇಲ್ಲೇ ಜೈಲು ವಾಸ ಅನುಭವಿಸಿದ್ದರು.
ಈ ಕಟ್ಟಡದ ಮೇಲಂತಸ್ತಿನಲ್ಲಿ 12 ಮತ್ತು ಕೆಳ ಅಂತಸ್ತಿನಲ್ಲಿ 12 ಸೆಲ್ಗಳಿವೆ. ಉಡುಪಿಯಲ್ಲಿ ಹೊಸ ಜೈಲು ನಿರ್ಮಾಣವಾಗುವವರೆಗೂ ಇದೇ ಜೈಲಿನಲ್ಲಿ ಕೈದಿಗಳನ್ನು ಇಡಲಾಗುತ್ತಿತ್ತು. ಸುಮಾರು 10 ವರ್ಷದಿಂದ ಈ ಕಟ್ಟಡ ಪಾಳುಬಿದ್ದಿದೆ.
ಆದರೆ ಕಟ್ಟಡ ಕೆಡವದೆ ಸಂರಕ್ಷಿಸಬೇಕು ಎಂಬ ನಿಟ್ಟಿನಲ್ಲಿ ಕಲಾವಿದರು, ಕಟ್ಟಡ ವಿನ್ಯಾಸಕರು ದೊಡ್ಡ ಆಂದೋಲನ ಮಾಡಿದ್ದರು. ಆದರೆ ಅಂತಿಮವಾಗಿ ನಗರಸಭೆಯ ಹೊಸ ಕಟ್ಟಡವನ್ನು ಈ ಜಾಗದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಸುಮಾರು 10 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಕೆಡವಲು 12 ಲಕ್ಷ ರೂ.ಗಳಿಗೆ ಟೆಂಡರ್ ಆಗಿದ್ದು ಈಗ ಹಂಚು ತೆಗೆಯುವ ಕೆಲಸ ಆರಂಭವಾಗಿದೆ. ಈ ನಡುವೆ ಸಬ್ ಜೈಲಿನ ಭಾಗವನ್ನು ಉಳಿಸಿ ಉಳಿದ ಕೆಲಸವನ್ನು ಮುಂದುವರಿಸುವಂತೆ ಡಿಸಿ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಕವಿ ಮುದ್ದಣ ಮಾರ್ಗದಲ್ಲಿರುವ ಈಗಿನ ನಗರ ಸಭಾ ಕಚೇರಿ ಇಕ್ಕಟ್ಟಿನಿಂದ ಕೂಡಿದ್ದು, ಹೊರಗೂ ವಾಹನ ಪಾರ್ಕಿಂಗ್ ಅವಕಾಶವಿಲ್ಲ. ಇಲ್ಲಿ ಸಭೆಗಳು ನಡೆದಾಗ ರಸ್ತೆಯಲ್ಲೇ ವಾಹನಗಳು ನಿಂತು ಬ್ಲಾಕ್ ಆಗುತ್ತವೆ. ಸಾರ್ವಜನಿಕರು ಎಲ್ಲೋ ದೂರದಲ್ಲಿ ವಾಹನ ನಿಲ್ಲಿಸಿ ಬರಬೇಕು. ಹೀಗಾಗಿ ಹೊಸ ಕಟ್ಟಡ ನಿರ್ಮಾಣದ ಬೇಡಿಕೆ ಜೋರಾಗಿತ್ತು. ಆದರೆ, ಕಳೆದ ನಾಲೈದು ವರ್ಷಗಳಿಂದಲೂ ನಿರ್ಮಾಣ ಯೋಜನೆ ನನೆಗುದಿಯಲ್ಲೇ ಇತ್ತು.
ಇದೀಗ ಹಳೆ ತಾಲೂಕು ಕಚೇರಿ ಜಾಗದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ನಗರಸಭೆಗೆ ಆದಾಯ ಬರುವಂತೆ ವಾಣಿಜ್ಯ ಸಂಕೀರ್ಣ ಮಾದರಿಯಲ್ಲಿ ಹೊಸ ಕಟ್ಟಡ ರೂಪಿಸುವ ನೆಲೆಯಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಇಲ್ಲಿ ಪಾರ್ಕಿಂಗ್ಗೆ ಸಮರ್ಪಕ ವ್ಯವಸ್ಥೆ ಮಾಡಬೇಕು ಎಂಬುದು ಜನರ ಬೇಡಿಕೆಯಾಗಿದೆ.
ನಗರಸಭೆ ಮತ್ತು ಪ್ರಾಧಿಕಾರ ಕಚೇರಿ ಒಟ್ಟಿಗೆ ಇದ್ದಲ್ಲಿ ಸಾರ್ವಜನಿಕ ಕೆಲಸ ಕಾರ್ಯ ಸುಲಲಿತವಾಗಿ ನೆರವೇರಲಿದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಪ್ರಾಧಿಕಾರದ ಕಚೇರಿಯನ್ನೂನಗರಸಭೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸುವ ನಿರ್ಧಾರದ ಬಗ್ಗೆ ಜನಪ್ರತಿನಿಧಿಗಳು ಯೋಚಿಸಬೇಕು ಎಂಬ ಬೇಡಿಕೆ ಇದೆ.