ಬಂಟ್ವಾಳ, ಆ.30(DaijiworldNews/AA): ನಿಷೇಧಿತ ಪಿ.ಎಫ್.ಐ.ನ ರಾಜಕೀಯ ಅಂಗ ಸಂಸ್ಥೆಯಾದ ಎಸ್.ಡಿ.ಪಿ.ಐ.ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೇಸ್ ಮಾನ ಕಳೆದುಕೊಂಡಿದ್ದು, ಇದೀಗ ಮಾಜಿ ಸಚಿವ ಬಿ.ರಮಾನಾಥ ರೈಯವರು, ಬಿಜೆಪಿಯವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಬಂಟ್ವಾಳ ಮಂಡಲದ ಕೋಶಾಧಿಕಾರಿ ಪುರಸಭಾ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ ಆರೋಪಿಸಿದ್ದಾರೆ.
ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಬಿ.ರಮಾನಾಥ ರೈ ಅವರು ಈ ರೀತಿಯ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುವ ಬದಲು ಪುರಸಭೆಯಲ್ಲಿ ದಾಖಲಾದ ದಾಖಲೆಗಳನ್ನು ಪರಿಶೀಲಿಸಿ ಮತ್ತೆ ಮಾತಾಡುವಂತೆ ಅವರು ತಿಳಿಸಿದ್ದಾರೆ. ಜನತೆಯನ್ನು ದಿಕ್ಕುತಪ್ಪಿಸುವ ದೃಷ್ಟಿಯಿಂದ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು ಇದು ಅವರಿಗೆ ಶೋಭೆಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾನು ಪುರಸಭೆಯಲ್ಲಿ ಅಧ್ಯಕ್ಷನಾಗಿದ್ದು ಕಾಂಗ್ರೆಸ್ ಎರಡು ಸದಸ್ಯರ ಬೆಂಬಲದೊಂದಿಗೆ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರಾದ ವಸಂತಿ ಗಂಗಾಧರ್ ಮತ್ತು ಸ್ವರ್ಣಲತಾ ಮಲ್ಲಿಯವರು ಬೆಂಬಲ ನೀಡಿದ ಕಾರಣದಿಂದ ನಾನು ಅಧ್ಯಕ್ಷನಾಗಿದ್ದೇನೆ ಹೊರತು ಮುಸ್ಲಿಂ ಲೀಗ್ ನ ಸಹಾಯದಿಂದ ಅಲ್ಲ ಎಂದರು. ಆ ಚುನಾವಣೆಯಲ್ಲಿ ಸ್ವತಃ ರಮಾನಾಥ ರೈ ಅವರು ಸಹ ಮತದಾನದಲ್ಲಿ ಭಾಗವಹಿಸಿದ್ದು ಅವರಿಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದರು. ಇದರಿಂದ ಯಾರ ಡಿ.ಎನ್.ಎ.ಬಗ್ಗೆಯೂ ಮಾತನಾಡುವ ನೈತಿಕತೆ ರಮಾನಾಥ ರೈ ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ನಿಮ್ಮ ಸುಳ್ಳು ಆರೋಪಗಳು ಬಂಟ್ವಾಳ ಜನತೆಗೆ ಗೊತ್ತಿರುವ ವಿಚಾರ ಎಂದರು.
ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಮಂಡಲದ ಕೋಶಾಧಿಕಾರಿ ದಿನೇಶ್ ಭಂಡಾರಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ ಕಾರ್ಯದರ್ಶಿಗಳಾದ ಪ್ರಭಾಕರ್ ಪ್ರಭು, ಜನಾರ್ದನ ಬೊಂಡಾಲ, ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್, ಮಾಧ್ಯಮ ಸಂಚಾಲಕ ಪುರುಷೋತ್ತಮ ಶೆಟ್ಟಿ ವಾಮದಪದವು, ಕಾರ್ಯಲಯ ಕಾರ್ಯದರ್ಶಿ ಪ್ರಣಾಮ್ ರಾಜ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.