ಉಡುಪಿ,ಆ.30(DaijiworldNews/AK): ರಾಸಾಯನಿಕಯುಕ್ತ ಗಣೇಶನ ಮೂರ್ತಿಯನ್ನು ಯಾವುದೇ ನದಿಗಳಲ್ಲಿ ಮತ್ತು ಇತರೆ ನೀರಿನ ಮೂಲದಲ್ಲಿ ವಿಸರ್ಜನೆ ಮಾಡುವುದರಿಂದ ನೀರಿನಲ್ಲಿರುವ ಜಲಚರಗಳಿಗೆ ಹಾನಿಯಾಗುವ ಜೊತೆಗೆ ಜಲ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಆದ್ದರಿಂದ ಜಲ ಸಂಪನ್ಮೂಲವನ್ನು ರಕ್ಷಿಸಲು ರಾಸಾಯನಿಕಯುಕ್ತ ಗಣೇಶನ ಮೂರ್ತಿಯನ್ನು ಬಳಸದೇ ಮಣ್ಣಿನ ಮೂರ್ತಿಯನ್ನು ಬಳಸಿ, ನಿರ್ದಿಷ್ಟ ಸ್ಥಳಗಳಲ್ಲಿಯೇ ಮೂರ್ತಿಯನ್ನು ವಿಸರ್ಜನೆ ಮಾಡಬೇಕು.
ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಸ್ಥಾಪಿಸಲು ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು, ಸೌಂಡ್ ಸಿಸ್ಟಮ್ ಬಳಸಬೇಕು. ಗಣೇಶನ ಮೂರ್ತಿಯನ್ನು ವಿಸರ್ಜಿಸುವಾಗ ಮೂರ್ತಿಗೆ ಹಾಕಲಾದ ಹೂವಿನ ಹಾರಗಳನ್ನು, ಇತರೆ ಅಪಾಯಕಾರಿ ಸಾಮಾಗ್ರಿಗಳನ್ನು ತೆಗೆದು ಸೂಕ್ತವಾಗಿ ವಿಲೇವಾರಿ ಮಾಡಿ ಮೂರ್ತಿಯನ್ನು ಮಾತ್ರ ವಿಸರ್ಜನೆ ಮಾಡಬೇಕು. ಗಣೇಶನ ಆರಾಧನೆ ವೇಳೆ ಬಳಸುವ ಹೂವು ಅಥವಾ ಇತರೆ ಯಾವುದೇ ವಸ್ತುವನ್ನು ನೀರಿನ ಮೂಲಗಳಲ್ಲಿ ವಿಸರ್ಜಿಸುವಂತಿಲ್ಲ. ಗಣೇಶ ಪ್ರತಿಷ್ಠಾಪನೆ ಮಾಡಿ ಆರಾಧಿಸುವ ಸ್ಥಳಗಳಲ್ಲಿ ಸೂಕ್ತ ತ್ಯಾಜ್ಯ ವಿಲೇವಾರಿಗೆ ಯಾವುದೇ ವ್ಯವಸ್ಥೆ ಬೇಕಾದಲ್ಲಿ ನಗರಸಭೆಯ ಆರೋಗ್ಯ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.
ಧಾನ್ಯ, ಹೂವಿನ ಬೀಜ ಹಾಗೂ ತರಕಾರಿ ಬೀಜಗಳನ್ನು ಒಳಗೊಂಡ ಗಣೇಶ ಮೂರ್ತಿಯನ್ನು ಬಳಸಲು ಆಧ್ಯತೆ ನೀಡಿ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬವನ್ನು ಆಚರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.