ಮಂಗಳೂರು, ಆ.28(DaijiworldNews/AA): ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ/ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಇಂದು ಸೆರೆ ಹಿಡಿದಿದ್ದಾರೆ.
ಕಾಸರಗೋಡು ಜಿಲ್ಲೆ ಮಂಜೇಶ್ವರ ಬಡಾಜೆ ಪೋಸ್ಟ್ ಪುಚ್ಚಿತ್ಬೈಲ್ ಹೌಸ್ ನಿವಾಸಿಗಳಾದ ಅಬ್ದುಲ್ ಸಲಾಂ ಯಾನೇ ಸಲಾಂ(30) ಮತ್ತು ಸೂರಜ್ ರೈ ಯಾನೇ ಅಂಕಿ(26) ಬಂಧಿತರು.
ಎಂಡಿಎಂಎ ಮಾದಕ ವಸ್ತುವನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಆಗಮಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮಂಗಳೂರು ಸಿಸಿಬಿ ಪೊಲೀಸರಿಗೆ ಲಭಿಸಿತ್ತು. ಬಳಿಕ ಮಂಗಳೂರು ನಗರದ ತಲಪಾಡಿ ಕೆ.ಸಿ.ರೋಡ್ ಬಳಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 75,000 ರೂ. ಮೌಲ್ಯದ 15 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 2 ಮೊಬೈಲ್ ಫೋನ್ಗಳು, ಡಿಜಿಟಲ್ ತೂಕ ಮಾಪಕ ಹಾಗೂ ಡಿಯೋ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಒಟ್ಟು 1,65,000 ರೂ. ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳ ಪೈಕಿ ಅಬ್ದುಲ್ ಸಲಾಂ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಹಾಗೂ ಸೂರಜ್ ರೈ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ.