ತಿರುವನಂತಪುರ ನ 28 : ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲೊಂದಾದ ಶಬರಿಮಲೆ ಮೇಲೆ ಉಗ್ರರು ಕಣ್ಣಿಟ್ಟಿರುವ ಆತಂಕಕಾರಿ ವಿಚಾರಬೆಳಕಿಗೆ ಬಂದಿದೆ. ಐಸಿಸ್ ಭಯೋತ್ಪಾದನಾ ಸಂಘಟನೆ ಜತೆ ನಂಟು ಹೊಂದಿದ್ದಾರೆ ಎನ್ನಲಾಗುವ ಶಂಕಿತ ಉಗ್ರರು ಅಯ್ಯಪ್ಪ ಭಕ್ತರನ್ನು ಗುರಿಯಾಗಿ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕೇರಳದಲ್ಲಿ ಸಾಕಷ್ಟು ಪ್ರಭಾವ ಬೀರಿರುವ ಐಸಿಎಸ್ ಉಗ್ರರು ವಿದೇಶದಿಂದಲೇ ಭಾರತದಲ್ಲಿ ಸಂಚು ರೂಪಿಸಿದೆ ಎಂದು ತಿಳಿಸಿದೆ. ವಿಷಾಹಾರಗಳ ಮೂಲಕ ಅಯ್ಯಪ್ಪ ಭಕ್ತರ ಮೇಲೆ ದಾಳಿ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.ಹೀಗಾಗಿ ರೈಲ್ವೆ ನಿಲ್ದಾಣದಲ್ಲಿ ಸರಬರಾಜು ಮಾಡಲಾಗುವ ನೀರು ಮತ್ತು ಕ್ಯಾಂಟೀನ್ ಗಳಲ್ಲಿನ ಆಹಾರ ತಯಾರಿಕೆಯಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸಲಾಗಿದೆ.
ಈ ಬಗ್ಗೆ ಇಸಿಸ್ ಉಗ್ರ ಸಂಘಟನೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಸಂದೇಶಗಳ ಹರಿದಾಡುತ್ತಿದ್ದು, ವಿಚಾರ ತಿಳಿಯುತ್ತಿದ್ದಂತೆಯೇ ಕೇರಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆದರಿಕೆ ಸಂದೇಶಗಳ ನಿಖರತೆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ’ ಎಂದು ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹ್ರಾ ಹೇಳಿದ್ದಾರೆ.