ಮಂಗಳೂರು, ಆ.28(DaijiworldNews/AA): ಇತ್ತೀಚೆಗೆ ಎಂಎಲ್ಸಿ ಐವನ್ ಡಿಸೋಜಾ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಭರತ್ ಅಲಿಯಾಸ್ ಯಕ್ಷಿತ್ (24), ದಿನೇಶ್ ಕುರ್ತಮೊಗೆರು(20) ಎಂದು ಗುರುತಿಸಲಾಗಿದೆ.
ಆರೋಪಿ ಭರತ್, ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಾರಾಯಣ ಕೋಡಿಮನೆ ನಿವಾಸಿ ರಾಘವ ಭಂಡಾರಿ ಪುತ್ರ. ಭರತ್ ವಿರುದ್ಧ ಈ ಹಿಂದೆ 3 ಹಲ್ಲೆ ಪ್ರಕರಣ ದಾಖಲಾಗಿದ್ದವು. ಮತ್ತೋರ್ವ ಆರೋಪಿ ದಿನೇಶ್ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪರ್ತಿಪಾಡಿ ಮನೆ ನಿವಾಸಿ ಆನಂದ ಪೂಜಾರಿ ಪುತ್ರನಾಗಿದ್ದು, ಕನ್ಯಾನದಲ್ಲಿ ಫೈನಾನ್ಸ್ ವಸೂಲಿಯಲ್ಲಿ ಕೆಲಸ ಮಾಡುತ್ತಿದ್ದ.
ರಾಜ್ಯಪಾಲರ ಬಗ್ಗೆ ಐವನ್ ಡಿಸೋಜಾ ಅವರು ನೀಡಿದ ಹೇಳಿಕೆಯಿಂದ ಸಿಟ್ಟಾಗಿ ಕಲ್ಲೆಸೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ರಾತ್ರಿ 9:30 ರ ಸುಮಾರಿಗೆ ಹೋಟೆಲ್ನಲ್ಲಿ ಊಟ ಮಾಡಿದ ಬಳಿಕ, ನಾವು ಐವನ್ ಡಿಸೋಜಾ ಅವರ ಮನೆಗೆ ಕಲ್ಲು ಎಸೆಯಲು ನಿರ್ಧರಿಸಿದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದು, ಈ ಮೂಲಕ ಆರೋಪಿಗಳಿಬ್ಬರು ಘಟನೆಯಲ್ಲಿ ಭಾಗಿಯಾಗಿರುವುದು ದೃಢಪಡಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಆ.22 ರಂದು ರಾತ್ರಿ ಸುಮಾರು 11 ಗಂಟೆಗೆ ಹೆಲ್ಮೆಟ್ ಹಾಕಿಕೊಂಡು ಬೈಕ್ನಲ್ಲಿ ಬಂದ ಆರೋಪಿಗಳು ಐವನ್ ಡಿಸೋಜಾ ಅವರ ಮನೆಯ ಮೇಲೆ ರಾತ್ರಿ ಕಲ್ಲು ತೂರಾಟ ಮಾಡಿ ಪರಾರಿಯಾಗಿದ್ದರು. ಇದಾದ ಬಳಿಕ 2 ನಿಮಿಷ ಬಿಟ್ಟು ಮತ್ತೆ ಬೈಕ್ನಲ್ಲಿ ಬಂದು ಕಲ್ಲು ತೂರಾಟ ಮಾಡಿದ್ದರು. ಇದರಿಂದ ಐವನ್ ಡಿಸೋಜಾ ಅವರ ಮನೆಯ ಕಿಟಕಿ ಗಾಜುಗಳು ಪುಡಿಯಾಗಿದ್ದವು. ಈ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಇದೀಗ ಘಟನೆಯ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.