ಉಡುಪಿ, ಆ.27(DaijiworldNews/AA): ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅದ್ಧೂರಿ ಆಚರಣೆಗಳು "ಕೃಷ್ಣ ಲೀಲೋತ್ಸವ" (ವಿಟ್ಲಪಿಂಡಿ)ದೊಂದಿಗೆ ಮುಕ್ತಾಯಗೊಂಡಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದುಬಂದಿತ್ತು.
ಸಾಂಪ್ರದಾಯಿಕ ವಿಟ್ಲಪಿಂಡಿ ಉತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸುಂದರವಾಗಿ ರಚಿಸಲಾದ ಶ್ರೀಕೃಷ್ಣ ದೇವರ ಜೇಡಿಮಣ್ಣಿನ ವಿಗ್ರಹವನ್ನು ಚಿನ್ನದ ರಥದಲ್ಲಿ ಹೊರತರಲಾಯಿತು. ಮಧ್ಯಾಹ್ನ 3:15 ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿ ಮೆರವಣಿಗೆ ಪ್ರಾರಂಭವಾಯಿತು. ಜೊತೆಗೆ ಚಂಡೆ, ಭಜನೆ ಗಾಯನ, ಹುಲಿ ವೇಷ ಪ್ರದರ್ಶನಗಳು ಮತ್ತು ವಿವಿಧ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.
ಮೊಸರು ಕುಡಿಕೆ ಒಡೆಯುವುದು, ಮೊಸರು, ಹಾಲು, ಬಣ್ಣ ತುಂಬಿದ ಮಡಕೆಗಳು ವಿಶೇಷವಾಗಿ ಭಕ್ತರ ಗಮನ ಸೆಳೆದವು. ಗೊಲ್ಲರ ವೇಷ ಧರಿಸಿದ ತಂಡವೊಂದು ಕಾರ್ ಸ್ಟ್ರೀಟ್ ಸುತ್ತ ಅಳವಡಿಸಿದ್ದ ಕಂಬಗಳಿಗೆ ಕಟ್ಟಿದ್ದ ಮಣ್ಣಿನ ಮಡಕೆಗಳನ್ನು ಒಡೆದವು.
ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರು, ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಪೀಠಾಧಿಪತಿ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶ ತೀರ್ಥರು ಸಾನಿಧ್ಯ ವಹಿಸಿದ್ದರು. ಇನ್ನು ಮಠದ ಸುತ್ತಮುತ್ತಲಿನ ವಿವಿಧೆಡೆ ಸಾವಿರಾರು ಭಕ್ತರಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.
ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಕಾರ್ ಸ್ಟ್ರೀಟ್ನಲ್ಲಿ ಚಿನ್ನದ ರಥದಲ್ಲಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ, ನಂತರ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಮುಳುಗಿಸಿ ಎರಡು ದಿನಗಳ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಅಂತ್ಯ ಹಾಡಲಾಯಿತು.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ನಗರವು ವಿವಿಧ ಹುಲಿ ನೃತ್ಯ ತಂಡಗಳು ಮತ್ತು ಇತರ ಟ್ಯಾಬ್ಲೋ ಪ್ರದರ್ಶನಗಳಿಂದ ತುಂಬಿತ್ತು. ಹಾಲಿವುಡ್ನಿಂದ ಪ್ರೇರಿತವಾದ ದೈತ್ಯಾಕಾರದ ಟೇಬಲ್ ಆಕ್ಸ್ ಮತ್ತು ಇತರ ಪಾತ್ರಗಳು ಸಾರ್ವಜನಿಕರನ್ನು ರಂಜಿಸಿದವು. ಶೀರೂರು ಮಠದ ವತಿಯಿಂದ ನಡೆದ ಹುಲಿವೇಷದ ಕಾಳಗದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.