ಬಂಟ್ವಾಳ, ಮೇ25(Daijiworld News/SS): ಇಲ್ಲಿನ ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ನೀರು ಪಾಲಾಗಿರುವ ದುರಂತ ಘಟನೆ ನಡೆದಿದೆ.
ಬಂಟ್ವಾಳ ತಾಲೂಕು ಕಲ್ಲಡ್ಕ-ಮಾಣಿ ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಸಮೀಪದ ಬರೀಮಾರು ಎಂಬಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಮನೀಷ್ (14) ಮತ್ತು ಅಜೀತ (40) ಎಂದು ಗುರುತಿಸಲಾಗಿದೆ.
ಇದೇ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ರಕ್ಷಿತ್ (13) ಎಂಬಾತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬಂಟ್ವಾಳ ತಾಲೂಕು ಬರೀಮಾರು ಗ್ರಾಮದ ಕಾಗೆಕಾನ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ನೀರಾಟವಾಡುತ್ತಿದ್ದಾಗ ಈ ಅವಘಡ ಸಂಭವಿಸಿರುವುದಾಗಿ ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.