ಉಡುಪಿ, ಆ.25(DaijiworldNews/AA): ಕರ್ನಾಟಕದ ಏಕೈಕ ಮಹಿಳಾ ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲೇ ಮಹಿಳೆಯರಿಗೆ ರಕ್ಷೆ ಇಲ್ಲದಂತಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ರಾಜ್ಯದ ಮಹಿಳೆಯರಿಗೆ ಕೇವಲ ಭಾಗ್ಯ ಲಕ್ಷ್ಮೀ ಯೋಜನೆ ಮಾತ್ರ ನೀಡಿದರೆ ಸಾಲದು ರಕ್ಷಣೆಯ ಗ್ಯಾರಂಟಿಯನ್ನು ನೀಡಬೇಕು ಎಂದಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಿಂದೂ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ನಡೆಸಿದ ಘಟನೆಯನ್ನು ತಕ್ಷಣ ಸಿಬಿಐ ತನಿಖೆಗೆ ಒಪ್ಪಿಸಿ ಘಟನೆಯ ಹಿಂದಿನ ಕಾಣದ ಕೈಗಳನ್ನು ತಕ್ಷಣ ಬಂಧಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ತಕ್ಷಣ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.
ಪೈಶಾಚಿಕ ಕೃತ್ಯ ನಡೆದು 3 ದಿನ ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೂ ಜಿಲ್ಲೆಗೆ ಆಗಮಿಸಿ ಸಂತ್ರಸ್ತೆಗೆ ಕಿಂಚಿತ್ ಸಾಂತ್ವನ ಹೇಳಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ತಪ್ಪಿದಲ್ಲಿ ಮಹಿಳಾ ಮೋರ್ಚಾದ ವತಿಯಿಂದ ಉಸ್ತುವಾರಿ ಸಚಿವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.