ಉಡುಪಿ, ಆ.25(DaijiworldNews/AA): ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ಆನ್ಲೈನ್ ಮೂಲಕ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಸೆನ್ ಪೊಲೀಸರು ಗುಜರಾತ್ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗುಜರಾತ್ ರಾಜ್ಯದ ಸೂರತ್ ನ ನವಾದಿಯಾ ಮುಖೇಶ್ ಭಾಯಿ ಗಣೇಶ್ಬಾಯಿ(44) ಹಾಗೂ ಗುಜರಾತ್ ರಾಜ್ಯದ ರಾಜ್ಕೋಟ್ ಜಿಲ್ಲೆಯ ಧರಮ್ಮಿತ್ ಕಮಲೇಶ್ ಚೌಹಾನ್(28) ಬಂಧಿತ ಆರೋಪಿಗಳು. ಬಂಧಿತರಿಂದ 5 ಮೊಬೈಲ್ ಪೋನ್ಗಳು ಹಾಗೂ 13,95,000ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಡುಪಿಯ ವೈದ್ಯರೊಬ್ಬರಿಗೆ ಜು.29ರಂದು ಅಪರಿಚಿತರು ಕಸ್ಟಮ್ಸ್ನಿಂದ ಕರೆ ಮಾಡಿದ್ದಾರೆ. ನಿಮ್ಮ ಆಧಾರ್ ನಂಬರ್ ಬಳಸಿ ಬುಕ್ ಆಗಿರುವ ಕೊರಿಯರ್ನಲ್ಲಿ 5 ಪಾಸ್ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5,000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬಯಿ ಕಸ್ಟಮ್ಸ್ರವರ ವಶದಲ್ಲಿದೆ ಎಂದು ಹೇಳಿದ್ದಾರೆ.
ಬಳಿಕ ಪೊಲೀಸ್ ಅಧಿಕಾರಿ ಎಂದು ನಂಬಿಸಿ ವೈದ್ಯರಿಗೆ ಕರೆ ಮಾಡಿ, ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದ್ದು, ನಿಮ್ಮ ಆಧಾರ್ ಕಾರ್ಡ್ನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದಾರೆ. ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೆ ಜು.29ರಿಂದ ಆ.9ರ ತನಕ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ ತಿಳಿಸಿದ್ದರು.
ಈ ಪ್ರಕರಣವನ್ನು ಸರಿಪಡಿಸಲು ಅಪರಿಚಿತರು ಹೇಳಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿ ಮಾಡುವಂತೆ ತಿಳಿಸಿದ್ದು ಅದರಂತೆ ವೈದ್ಯರು, ತಮ್ಮ ಖಾತೆಯಿಂದ ಆ.6ರಿಂದ ಆ.9ರವರೆಗೆ ಹಂತ ಹಂತವಾಗಿ ಒಟ್ಟು 1,33,81,000ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.