ಪುತ್ತೂರು, ಆ.25(DaijiworldNews/AA): ಮನೆ ಮಂದಿ ಇಲ್ಲದಿರುವು ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು, ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ಆಗಸ್ಟ್ 24 ರಂದು ಬೆಳಕಿದೆ ಬಂದಿದೆ.
ಕಡಬಾಗಿಲು ನಿವಾಸಿ ಸಾರಮ್ಮ ಎಂಬುವವರ ನಿವಾಸದಲ್ಲಿ ಕಳ್ಳತನ ನಡೆದಿದೆ. ಸಾರಮ್ಮ ಅವರ ಸೊಸೆ ಆಗಸ್ಟ್ 23 ರಂದು ಮೊಮ್ಮಗನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ರಾತ್ರಿ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಆಗಸ್ಟ್ 24ರಂದು ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿದೆ.
ಕಳ್ಳರು ಮೊದಲು ಮುಖ್ಯ ಬಾಗಿಲಿನ ಬೀಗ ಒಡೆಯಲು ಯತ್ನಿಸಿದ್ದಾರೆ. ಬಳಿಕ ಅದು ಸಾಧ್ಯವಾಗದೇ ಇದ್ದಾಗ ಮನೆ ಕಿಟಕಿಯ ಗ್ರಿಲ್ ಅನ್ನು ಮುರಿದು ಒಳ ಪ್ರವೇಶಿಸಿದ್ದಾರೆ. ನಂತರ ಒಳ ಪ್ರವೇಶಿಸಿದ ಕಳ್ಳರು 3 ಪವನ್ ಚಿನ್ನಾಭರಣ, 35,000 ರೂ.ನಗದು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಸಾರಮ್ಮ ಅವರ ಮಗ ಇಮ್ರಾನ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಾರಮ್ಮ, ಸೊಸೆ ಹಾಗೂ ಮೊಮ್ಮಗನೊಂದಿಗೆ ವಾಸಿಸುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆದಿದ್ದು, ಮನೆಯವರಿಗೆ ಪರಿಚಯವಿರುವವರು ಶಾಮೀಲಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣೆ ಎಸ್ಐ ಸುಷ್ಮಾ ಜಿ ಬಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.