ಮಂಗಳೂರು, ಮೇ25(Daijiworld News/SS): ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್'ಮೆಂಟ್ ಕಂಪೆನಿ ನಗರದ 34 ಮಂದಿ ಯುವಕರನ್ನು ವಿದೇಶಕ್ಕೆ ಕರೆದೊಯ್ದು ಸೂಕ್ತ ಉದ್ಯೋಗ ಕಲ್ಪಿಸದೆ ವಂಚಿಸಿದ ಘಟನೆ ಈಗಾಗಲೇ ಭಾರೀ ಸುದ್ದಿಯಾಗಿದ್ದು. ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್'ಮೆಂಟ್ ಎಂಬ ಕಂಪೆನಿಯಿಂದ ವಂಚನೆಗೊಳಗಾದ 34 ಮಂದಿ ಮಂಗಳೂರಿಗರು ಕಳೆದ 6 ತಿಂಗಳಿನಿಂದ ಕುವೈತ್'ನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಕುವೈತ್'ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಪ್ರಸಾದ್ ಶೆಟ್ಟಿ ಎಂಬಾತ ಪ್ರತಿಯೊಬ್ಬರಿಂದ 65 ಸಾವಿರ ರೂಪಾಯಿ ವಸೂಲಿ ಮಾಡಿದ್ದಾನೆ. ಆದರೆ, ಕುವೈತ್'ಗೆ ತೆರಳಿದ್ದ ಯುವಕರು ಮಾತ್ರ ಸರಿಯಾದ ಕೆಲಸ ದೊರೆಯದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇದೀಗ ಈ ಘಟನೆಗೆ ಸಂಸದ ಡಿ.ವಿ.ಸದಾನಂದ ಗೌಡ ಪ್ರತಿಕ್ರಿಯಿಸಿದ್ದು, ಕುವೈತ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರ ಬಗ್ಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರಿಗೂ ತಿಳಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.