ಮಂಗಳೂರು,ಮೇ 25 (Daijiworld News/MSP): ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಸರಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘ ವಿರೋಧಿಸಿದ್ದು, ಅದರ ಬದಲು ಅಂಗನವಾಡಿ ಮೇಲ್ದರ್ಜೆಗೇರಿಸಿ ಅಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಎಲ್ ಕೆ ಜಿ ಮತ್ತು ಯು ಕೆಜಿ ತರಗತಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದೆ.
ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಎಸ್ ವರಲಕ್ಷ್ಮಿ, ಅಂಗನವಾಡಿಯಲ್ಲೇ ಎಲ್.ಕೆ.ಜಿ ಯುಕೆಜಿ ಯನ್ನು ಪ್ರಾರಂಭಿಸಿ, ಅಂಗನವಾಡಿ ನೌಕರರಿಗೆ ಈ ಕೆಲಸವನ್ನು ಅಧಿಕೃತವಾಗಿ ವಹಿಸಬೇಕು. ಈಗ ಇರುವ ಅಂಗನವಾಡಿ ನೌಕರರಿಗೆ ಮಕ್ಕಳ ಜೊತೆಗಿನ ಆತ್ಮೀಯ ತಾಯ್ತನದ ಒಡನಾಟವನ್ನು ಬಲವರ್ಧನೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗಿರುವ ಕೌಶಲ್ಯವನ್ನು ಮತ್ತಷ್ಟು ವೃದ್ಧಿಸಲು ಅವರಿಗೆ ಸೂಕ್ತ ತರಬೇತಿ ನೀಡಬೇಕು. ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಿ, ಶಾಲೆಗಳ ಮಾದರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಸಬೇಕು. ಇದಕ್ಕೆ ಕೊಡಬೇಕಾದ ಹಣಕಾಸು ಸಹಾಯವನ್ನು, ಮೂಲಸೌಕರ್ಯವನ್ನು, ಪ್ರೋತ್ಸಾಹವನ್ನು ಹೆಚ್ಚಿಸಬೇಕು. ಅಂಗನವಾಡಿಯಲ್ಲಿ ಪಡೆಯುತ್ತಿರುವ ಶಾಲಾಪೂರ್ವ ಶಿಕ್ಷಣದ ಆಧಾರದಲ್ಲಿ ಇಲ್ಲಿಂದಲೇ ಮುಂದಿನ ಪ್ರಾಥಮಿಕ ಹಂತದ ಶಿಕ್ಷಣ ಪಡೆಯಲು ಟಿಸಿ ಯನ್ನು ವರ್ಗಾಯಿಸುವ ಕ್ರಿಯೆ ಜಾರಿ ಮಾಡಬೇಕು ಮಾಡಬೇಕು ಎಂದರು.