ಬಂಟ್ವಾಳ, ಆ.23(DaijiworldNews/AK): ಅಡ್ಡೂರು ಸೇತುವೆ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭೇಟಿ ನೀಡಿದ್ದಾರೆ. ಸೇತುವೆ ಶಿಥಿಲಗೊಂಡ ಹಿನ್ನಲೆಯಲ್ಲಿ ಸೇತುವೆ ಮೂಲಕ ಘನವಾಹನಗಳಿಗೆ ಸಂಚಾರಕ್ಕೆ ನಿಷೇಧವನ್ನು ಜಿಲ್ಲಾಧಿಕಾರಿ ಅದೇಶ ನೀಡಿದ್ದರು.
ಆದರೆ ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು ಬಸ್ ಸಂಚಾರ ಮಾಡಲು ಅವಕಾಶ ನೀಡುವಂತೆ ಇಲ್ಲಿನ ಸ್ಥಳೀಯರು ಬೇಡಿಕೆಯನ್ನಿಟ್ಟಿದ್ದರು.
ಜನರ ಬೇಡಿಕೆಯನ್ನು ಆಲಿಸಿದ ಜಿಲ್ಲಾಧಿಕಾರಿ ಅವರು ಆ.26 ಕ್ಕೆ ಸೇತುವೆಯ ಸಾಮರ್ಥ್ಯವನ್ನು ಪರಿಶೀಲನೆ ನಡೆಸಲು ಪರಿಣತರ ತಂಡ ಆಗಮಿಸಲಿದೆ. ಅವರು ಸೇತುವೆಯ ಸಾಮರ್ಥ್ಯ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ.ಅವರೆಗೆ ಜನರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರಸ್ತುತ ಸೇತುವೆ ಮೂಲಕ ಯಾವುದೇ ಘನ ವಾಹನಗಳು ಸಂಚಾರ ಮಾಡದಂತೆ ತಡೆಯಲು ಸೇತುವೆಯ ಎರಡು ಬದಿಯಲ್ಲಿ ಪೋಲಿಸ್ ಮಾನಿಟರಿಂಗ್ ವ್ಯವಸ್ಥೆ ಮಾಡಲಾಗುತ್ತದೆ.ಪೊಳಲಿ ಕಡೆಯಿಂದ ಜಿಲ್ಲಾ ಪೋಲೀಸ್ ಇಲಾಖೆಯ ವತಿಯಿಂದ ಹಾಗೂ ಅಡ್ಡೂರು ಭಾಗದಲ್ಲಿ ಕಮೀಷನರ್ ವತಿಯಿಂದ ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಲು ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.