ಬಂಟ್ವಾಳ, ಆ.23(DaijiworldNews/AK): ಪೊಳಲಿಯಿಂದ ಅಡ್ಡೂರುವರೆಗೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಬಸ್ ವ್ಯವಸ್ಥೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವೈಯಕ್ತಿಕ ನೆಲೆಯಲ್ಲಿ ಮಾಡಿದ್ದು,ಬಸ್ ಓಡಾಟಕ್ಕೆ ಇಂದು ಬೆಳಿಗ್ಗೆ ಪೊಳಲಿಯಲ್ಲಿ ಚಾಲನೆ ನೀಡಲಾಯಿತು.
ಇಂದು ಬೆಳಿಗ್ಗೆ ಪೊಳಲಿ ದೇಗುಲದ ಮುಂಭಾಗದಲ್ಲಿ, ಅರ್ಚಕರ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮಿನಿ ಬಸ್ಗೆ ರಾಜೇಶ್ ನಾಯ್ಕ್ ಉಳಿಪಾಡಿಯವರು ಚಾಲನೆ ನೀಡಿದ್ದಾರೆ.ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆಯನ್ನು ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿಕೊಂಡವರೇ ಹೆಚ್ಚಾಗಿದ್ದಾರೆ. ದುರಸ್ಥಿ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಜನರ ಸದುಪಯೋಗಕ್ಕಾಗಿ ಉಚಿತ ವಾಹನದ ವ್ಯವಸ್ಥೆಯನ್ನು ಶಾಸಕ ರಾಜೇಶ್ ನಾಯ್ಕ್ ಮಾಡಿದ್ದಾರೆ.
ಪೊಳಲಿ ಶ್ರೀ ದೇವಿಯ ಭಕ್ತಾದಿಗಳಿಗೆ ಹಾಗೂ ಊರ ಜನರ ಸದುಪಯೋಗಕ್ಕಾಗಿ ಪೊಳಲಿಯಿಂದ ಅಡ್ಡೂರು ತನಕ ಸೇತುವೆ ದುರಸ್ತಿಯಡಗುವವರೆಗೆ ಉಚಿತ ವಾಹನದ ವ್ಯವಸ್ಥೆಯೂ ಜನರಿಗೆ ಪ್ರಯೋಜನವಾಗಲಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಡ್ಡೂರು ಪೊಳಲಿ ಪಲ್ಗುನಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ಕಾರಣ ಘನ ವಾಹನಗಳ ಸಂಚಾರ ವನ್ನು ನಿಷೇಧಿಸುವ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನಲೆಯಲ್ಲಿ ಸಾರ್ವಜನಿಕರು ಗೊಂದಲಕ್ಕೆ ಸಿಲುಕಿದ್ದರು. ಕೊನೆಗೆ ಜಿಲ್ಲಾಧಿಕಾರಿ, ತಜ್ಞರು ಹಾಗೂ ಶಾಸಕರು ಈ ಗೊಂದಲವನ್ನು ನಿವಾರಿಸುವಂತಹ ಕೆಲಸ ಮಾಡಿದ್ದರು.
ಇನ್ನು ಈ ಬಗ್ಗೆ ಮಾತನಾಡಿದ ಚಂದ್ರಶೇಖರ್ ಶೆಟ್ಟಿ ಪೊಳಲಿ ಭಾಗದ ಜನರ ಕಷ್ಟವನ್ನು ಅರಿತು ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಅವರು ಒಂದು ಮಿನಿ ಬಸ್ ವ್ಯವಸ್ಥೆಯನ್ನು ಖರೀದಿ ಮಾಡಿದ್ದಾರೆ. ಬಸ್ ನ್ನು ಸಾರ್ವಜನಿಕರ ಸಂಚಾರಕ್ಕೆ ವಿನಿಯೋಗ ಮಾಡಲು ಅವರು ನೀಡಿದ್ದಾರೆ. ಇದು ಅಡ್ಡೂರಿನಿಂದ ಪೊಳಲಿಗೆ ಮಾತ್ರ ಇರುತ್ತದೆ. ಇದು ಕೆಲಸಕ್ಕೆ ಹೋಗುವವರಿಗೆ, ವಿದ್ಯಾರ್ಥಿಗಳಿಗೆ, ಪೊಳಲಿಗೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ನಾವು ಆ.22 ರಂದು ಬೆಳಿಗ್ಗೆ ಮಾತನಾಡಿದಾಗ ಸಂತೋಷದಿಂದ ಜನರ ಕಷ್ಟಕ್ಕೆ ಸ್ಪಂದಿಸುವುದಾಗಿ ತಿಳಿಸಿದ್ದಲ್ಲದೆ ಕೂಡಲೇ ಅವರು ಬಸ್ ಖರೀದಿ ಮಾಡಿ ಜನರ ಸಂಚಾರಕ್ಕೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾಡಳಿತ ಮಾಡಬೇಕಾದ ಕಾರ್ಯವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಮಾಡಿದ್ದಾರೆ ಎಂಬ ಅಭಿಪ್ರಾಯವನ್ನು ಸ್ಥಳೀಯರು ತಿಳಿಸಿದ್ದು,ಶಾಸಕರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ , ವೆಂಕಟೇಶ್ ನಾವೊಡ, ಸುಕೇಶ್ ಚೌಟ, ಚಂದ್ರಶೇಖರ್ ಶೆಟ್ಟಿ, ಭುವನೇಶ್, ಚಂದ್ರಹಾಸ ಪಳ್ಳಿಪಾಡಿ, ಲೋಕೇಶ್ ಭರಣಿ, ಯಶಂವತ್ ಕೊಟ್ಯಾನ್ ಪೊಳಲಿ, ಸುಬ್ಬಯ್ಯ ನಾಯ್ಕ್, ಕುಮಾರ್ ಪೊಳಲಿ, ಯಶೋಧರ ಪೊಳಲಿ, ಸಚಿನ್ ಅಡಪ, ಹರೀಶ್ ಬಳ್ಳಿ ಗುರುಪುರ, ಅಶೋಕ್ ಬಡ್ಕಬೈಲ್, ಸುರೇಶ್, ಸಂದೀಪ್ ಪೊಳಲಿ, ಕಾರ್ತಿಕ್ ಬಳ್ಲಾಲ್, ಸಂತೋಷ್ ಮಣಿಕಂಠ, ಜಯಶ್ರೀ ಕಲ್ಲಕೇರ ಮೇರಮಜಲ್, ಚಂದ್ರವತಿ ಪೊಳಲಿ ಭಾಗವಹಿಸಿದರು