ಮಂಗಳೂರು, ಮೇ 25 (Daijiworld News/MSP): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿ ಪುನರಾಯ್ಕೆಯಾದ ನಳಿನ್ ಕುಮಾರ್ ಕಟೀಲ್ ಹಾಗೂ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿತ್ತೇನೆ. ಆದರೆ ಈ ಸೋಲಿನಿಂದ ನಾವು ದೃತಿಗೆಡುವುದಿಲ್ಲ, ಯಾಕೆಂದರೆ ಸೋಲು ಎನ್ನುವುದು ಶಾಶ್ವತವಲ್ಲ, ನಾವು ಜನಸಾಮಾನ್ಯರ ಸೇವೆ ಮಾಡಲು ಈಗಲೂ ಕಟಿಬದ್ದ ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮೇ 25 ರ ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಖಾದರ್, ಪ್ರಧಾನಿ ನರೇಂದ್ರ ಮೋದಿ ಜನರಿಗೆ ಈ ಹಿಂದೆ ಅಶ್ವಾಸನೆ ನೀಡಿದಂತೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕಲಿ ಹಾಗೂ ಗ್ಯಾಸ್ , ತೈಲ ಬೆಲೆ ಇಳಿಕೆಯಾಗಲು ಸೂಕ್ತ ಕ್ರಮ ಕೈಗೊಳ್ಳಲಿ ಎಂದರು. ದೇಶದಲ್ಲಿ ಮತ್ತೆ ಪುಲ್ವಾಮಾ ರೀತಿಯ ದಾಳಿ ಆಗದಿರಲಿಇದಕ್ಕಾಗಿ ಸೈನಿಕರಿಗೆ ಇನ್ನಷ್ಟು ಹೆಚ್ಚುವರಿ ಭದ್ರತೆ ನೀಡಲಿ. ದೇಶ ಕಾಯುವ ಸೈನಿಕರನ್ನು ಬಸ್ ನಲ್ಲಿ ಕಳುಹಿಸುವ ಬದಲು ಅವರ ಸುರಕ್ಷೆಗಾಗಿ ವಿಮಾನದಲ್ಲಿ ಕಳುಹಿಸಲಿ ಎಂದು ಸಲಹೆ ನೀಡಿದರು.
ಇನ್ನು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂಬ ಬಿ.ಸಿ ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಮುಂದೆ ನಾಲ್ಕು ವರ್ಷಗಳ ಕಾಲ ಕುಮಾರಸ್ವಾಮಿಯವರೇ ಸಿಎಂ ಆಗಿರುತ್ತಾರೆ. ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ನಿಷ್ಟರಾಗಿದ್ದಾರೆ. ಬಿ.ಸಿ ಪಾಟೀಲ್ ಅವರ ಹೇಳಿಕೆ ಸರಿಯಾದುದಲ್ಲ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಆದೇಶದಂತೆ ಮೈತ್ರಿ ಧರ್ಮ ಕಾಪಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.