ಸುಳ್ಯ, ಮೇ 25 (Daijiworld News/MSP): ಈ ಬಾರಿಯ ನಗರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. “ಮೂಡಬಿದಿರೆ, ಮುಲ್ಕಿ ಹಾಗೂ ಸುಳ್ಯ ಪಟ್ಟಣ ಪಂಚಾಯತ್ಗಳಿಗೆ ಈ ಬಾರಿ ಚುನಾವಣೆ ನಡೆಯಲಿದ್ದು ಮೂರು ಕಡೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜನರೊಂದಿಗೆ ಬೆರೆಯುವ ಯೋಗ್ಯ ಸಾಮರ್ಥ್ಯದ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಿದೆ. ನಗರವನ್ನು ಸರ್ವತೋಮುಖ ಅಭಿವೃದ್ಧಿ ಮಾಡುವ ಗುರಿ ನಮ್ಮ ಮುಂದಿದೆ. ರಾಜ್ಯ ಸರಕಾರವೂ ನಮ್ಮದಿದೆ. ಈ ಎಲ್ಲ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಸುಳ್ಯದಲ್ಲಿ ಹಲವು ಸಮಸ್ಯೆಗಳು ಜೀವಂತವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಇವುಗಳ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಲಾಗುವುದು. ವೆಂಟೆಡ್ ಡ್ಯಾಮ್ ನಿರ್ಮಿಸಿ ಪಟ್ಟಣಕ್ಕೆ ನೀರಿನ ವ್ಯವಸ್ಥೆ ಮಾಡಲಾಗುವುದು“ ಎಂದು ಹೇಳಿದ ಹರೀಶ್ ಕುಮಾರ್ ಬಿಜೆಪಿ ಕಳೆದ ಮೂರು ಅವಧಿಗಳಲ್ಲಿ ಅಧಿಕಾರದಲ್ಲಿದ್ದರೂ ಅವರಿಂದ ನಗರದ ಅಭಿವೃದ್ಧಿ ಆಗಿಲ್ಲ ಎಂದು ಹೇಳಿದರು.
ಒಂದು ಕ್ಷೇತ್ರದಲ್ಲಿ ಒಬ್ಬರಿಗೆ ಮಾತ್ರ ಸ್ಪರ್ಧಿಸಲು ಸಾಧ್ಯವಾಗುವುದು. ಆಕಾಂಕ್ಷಿಗಳು ಹಲವು ಮಂದಿ ಇರಬಹುದು. ಅವಕಾಶ ಸಿಗದವರು ಅಸಮರ್ಥರು ಎಂದು ಅರ್ಥವಲ್ಲ. ಬಂಡಾಯವಾಗಿ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ನಾಯಕರು ಮಾತನಾಡಿದ್ದಾರೆ. ಆದರೆ ಕೆಲವರು ನಾಮಪತ್ರ ವಾಪಸ್ ಪಡೆದಿಲ್ಲ. ಈ ವಿದ್ಯಮಾನಗಳ ಕುರಿತು ಬ್ಲಾಕ್ ಅಧ್ಯಕ್ಷರು ವರದಿ ಸಲ್ಲಿಸುತ್ತಾರೆ. ವರದಿ ಬಂದ ಬಳಿಕ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಲೋಕಸಭಾ ಚುನಾವಣೆ ನಡೆದು ಫಲಿತಾಂಶವು ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ನೀಡಿದ ತೀರ್ಪಿಗೆ ತಲೆಬಾಗಲೇ ಬೇಕು. ಆದರೆ ಇದು ಜನ ಮತವೋ- ಇವಿಎಂ ಮತವೋ ಎಂಬ ಸಂಶಯ ನಮ್ಮ ಮುಂದಿದೆ ಕಳೆದ ೫ ವರ್ಷಗಳಲ್ಲಿ ವಿಪಕ್ಷಗಳಿಗೆ ಈ ಕುರಿತು ಸಂಶಯ ಬಂದು ಜನರ ಮುಂದಿಟ್ಟಿದೆ. ಬಹುತೇಕ ದೇಶಗಳು ಇವಿಎಂ ಮೂಲಕ ಚುನಾವಣೆ ನಡೆಸುತ್ತಿಲ್ಲ. ಬ್ಯಾಲೆಟ್ ಮೂಲಕ ಚುನಾವಣೆ ನಡೆಯಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಹೇಳಿದರು.
ಕ್ಷೇತ್ರದಲ್ಲಿ ಕಳೆದ ೨೮ ವರ್ಷಗಳಿಂದಲೂ ನಮ್ಮ ಸಂಸದರು ಇಲ್ಲ. ಈ ಬಾರಿ ಹೊಸ ಮುಖಕ್ಕೆ ಆದ್ಯತೆ ನೀಡಬೇಕೆಂಬ ಬೇಡಿಕೆ ಇತ್ತು. ಹೀಗಾಗಿ ಯುವ ನಾಯಕ ಮಿಥುನ್ ರೈಯವರಿಗೆ ಅವಕಾಶ ನೀಡಲಾಯಿತು. ಗೆಲ್ಲುವ ವಿಶ್ವಾಸವೂ ಇತ್ತು. ಆದರೆ ಈ ಫಲಿತಾಂಶ ನಿರಾಸೆ ತಂದಿದೆ. ಮತದಾನದಿಂದ ಮಾತ್ರ ಹೀಗಾಗಲು ಸಾಧ್ಯವಿಲ್ಲ ಎಂಬ ಭಾವನೆ ನಮ್ಮಲ್ಲಿ ಮೂಡಿದೆ ಎಂದು ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷ ನಂದಕುಮಾರ್, ನಗರ ಪಂಚಾಯತ್ ಚುನಾವಣಾ ಅಭ್ಯರ್ಥಿಗಳಾದ ಕೆ.ಎಂ.ಮುಸ್ತಫ, ಕೆ.ಗೋಕುಲ್ದಾಸ್, ಧೀರ ಕ್ರಾಸ್ತ, ಶಶಿಧರ್ ಎಂ.ಜೆ, ಸುಜಯ ಕೃಷ್ಣ, ಶ್ರೀಲತಾ ಪ್ರಸನ್ನ, ಚಂದ್ರಕುಮಾರ್, ಉಮ್ಮರ್ ಎಸ್.ಎಂ., ಬಾಲಕೃಷ್ಣ ಭಟ್ ಕೊಡೆಂಕೇರಿ, ಪ್ರೇಮಲತಾ ನಾರಾಯಣ, ಚಂದ್ರಕಲಾ ಪ್ರಭಾಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಕಾಂಗ್ರೆಸ್ ಮುಖಂಡರಾದ ಎಸ್.ಸಂಶುದ್ದೀನ್, ಸತೀಶ್ ಕೂಜುಗೋಡು, ಲಕ್ಷ್ಮೀ ಸುಬ್ರಹ್ಮಣ್ಯ, ಪ್ರವೀಣ್ ರೈ ಮರುವಂಜ, ರಫೀಕ್ ಪಡು, ಲಕ್ಷ್ಮಣ ಶೆಣೈ, ಸುಧೀರ್ ರೈ ಮೇನಾಲ, ಸತ್ಯಕುಮಾರ್ ಆಡಿಂಜ, ನಾರಾಯಣ ಜಟ್ಟಿಪಳ್ಳ, ನಾರಾಯಣ ಟೈಲರ್, ಚಂದ್ರ ಕಂದಡ್ಕ, ಪ್ರಭಾಕರ ನಾಯಕ್ ಮೊದಲಾದವರಿದ್ದರು.