ಬಂಟ್ವಾಳ, ಆ.22 (DaijiworldNews/AK) :ಬಂಟ್ವಾಳ ಪುರಸಭೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ - ಎಸ್ ಡಿಪಿಐ ಮೈತ್ರಿ ಮುಂದುವರಿದಿದ್ದು, ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ವಾಸುಪೂಜಾರಿ ಲೊರೆಟ್ಟೋ ಹಾಗೂ ಉಪಾಧ್ಯಕ್ಷರಾಗಿ ಎಸ್ ಡಿಪಿಐನ ಮೊನೀಶ್ ಆಲಿ ಕೆಳಗಿನಪೇಟೆ ಅವರು ಆಯ್ಕೆಯಾಗಿದ್ದಾರೆ.
ಬಂಟ್ವಾಳ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಗುರುವಾರ ನಡೆದಿದ್ದು, ಬಂಟ್ವಾಳ ತಹಶೀಲ್ದಾರ್ ಡಿ.ಅರ್ಚನಾ ಭಟ್ ಚುನಾವಣಾಧಿಕಾಯಾಗಿ ನೂತನ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು.ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಹಾಗು ಸಿಬ್ಬಂದಿಗಳು ಸಹಕರಿಸಿದರು.
ಅಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕು,ಉಪಾಧ್ಯಕ್ಷ ಹುದ್ದೆ ಹಿ.ವರ್ಗ ( ಎ) ಗೆ ಮೀಸಲಾತಿ ನಿಗದಿಪಡಿಸಲಾಗಿತ್ತು. ಒಟ್ಟು 27 ಸದಸ್ಯ ಬಲವನ್ನು ಹೊಂದಿರುವ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಗಂಗಾಧರ ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಸದಸ್ಯರ ಬಲ 26ಕ್ಕೆ ಕುಸಿದಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11ಸ್ಥಾನವನ್ನು ಹೊಂದಿದ್ದರೆ. ಬಿಜೆಪಿಯಿಂದ 4 ಸದಸ್ಯರನ್ನು ಹೊಂದಿದ್ದ ಎಸ್.ಡಿ.ಪಿ.ಐ. ಇಲ್ಲಿ ನಿರ್ಣಾಯಕವಾಗಿತ್ತು.
ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಲ್ಲಿ ಸಂದರ್ಭ ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಶಾಸಕ ರಾಜೇಶ್ ನಾಯ್ಕ್ ಅವರಿಗೂ ಮತದಾನದ ಅವಕಾಶವಿದ್ದುದರಿಂದ ಬಿಜೆಪಿ ತನ್ನ ಸಂಖ್ಯೆಯನ್ನ13 ಕ್ಕೇರಿಸಿಕೊಂಡಿತ್ತು. ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ. ಎರಡನೇ ಅವಧಿಗೂ ಅಧಿಕಾರದಲ್ಲಿ ಮೈತ್ರಿ ಮುಂದುವರಿದಿದರಿಂದ 15 ಮತಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಅಧ್ಯಕ್ಷ ಹುದ್ದೆಗೂ ನಾಮಪತ್ರ:
ನಾಮಪತ್ರ ಸಲ್ಲಿಕೆ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಬಿ.ವಾಸು ಪೂಜಾರಿ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ ಎಸ್.ಡಿ.ಪಿ.ಐ.ನಿಂದಲು ಡಮ್ಮಿಯಾಗಿ ಸದಸ್ಯ ಇದ್ರೀಸ್ ನಾಮಪತ್ರ ಸಲ್ಲಿಸಿದ್ದರು.ಹಾಗೂ ಬಿಜೆಪಿಯ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಸ್ಪರ್ಧೆಗಿಳಿದಿದ್ದರು. ವಿಶೇಷ ಎಂಬಂತೆ ಉಪಾಧ್ಯಕ್ಷ ಸ್ಥಾನಕಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾದು ನೋಡುವ ತಂತ್ರ ಅನುಸರಿಸಿತು. ಎಸ್.ಡಿ.ಪಿ.ಐ. ಮೊನೀಶ್ ಆಲಿ ಮತ್ತು ಬಿಜೆಪಿಯ ಹರಿಪ್ರಸಾದ್ ಅವರು ಉಪಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುವ ವೇಳೆ ನಿರೀಕ್ಷೆಯಂತೆ ಎಸ್.ಡಿ.ಪಿ.ಐ.ನ ಇದ್ರೀಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿತನದಿಂದ ಹಿಂದಕ್ಕೆ ಸರಿದರು.
ಈ ವೇಳೆ ಕಾಂಗ್ರೆಸ್ ನ ಅಧ್ಯಕ್ಷ ಅಭ್ಯರ್ಥಿ, ಎಸ್.ಡಿ.ಪಿ.ಐ.ನ ಉಪಾಧ್ಯಕ್ಷ ಅಭ್ಯರ್ಥಿ ಹಾಗೂ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಕಣದಲ್ಲಿದ್ದು, ಕಾಂಗ್ರೆಸ್ - ಎಸ್.ಡಿ.ಪಿ.ಐ. ಮೈತ್ರಿ ಆಯ್ಕೆಗೆ ವೇದಿಕೆ ಸಿದ್ದಗೊಂಡಿತ್ತು. ನಿರೀಕ್ಷೆಯಂತೆ ಕಾಂಗ್ರೆಸ್ ನ ವಾಸುಪೂಜಾರಿ ಅದ್ಯಕ್ಷರಾಗಿ, ಎಸ್.ಡಿ.ಪಿ.ಐ.ನ ಮೊನೀಶ್ ಆಲಿ ಉಪಾಧ್ಯಕ್ಷರಾಗಿ ಅಯ್ಕೆಗೊಂಡು ಸರಳ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮೊದಲ ಅವಧಿಯಲ್ಲಿ ಕಾಂಗ್ರೆಸ್ - ಎಸ್ ಡಿಪಿಐ ಮೈತ್ರಿ ಮಾಡಿಕೊಂಡರೂ,ಕಾಂಗ್ರೆಸ್ ಎಸ್ ಡಿಪಿಐ ಗೆ ಯಾವುದೇ ನೀಡಿರಲಿಲ್ಲ ಹಾಗಾಗಿ ಕಾಂಗ್ರೆಸ್ ನ ಮಹಮ್ಮದ್ ಶರೀಫ್ ಮತ್ತು ಜೆಸಿಂತಾ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಾಗಿದ್ದರು.
ಎರಡನೇ ಅವಧಿಯಲ್ಲಿ ಎಸ್ ಡಿಪಿಐ ಅಧ್ಯಕ್ಷ ಹುದ್ದೆಯ ಮೇಲೆಯೇ ಕಣ್ಣಿಟ್ಟಿತ್ತು.ಇದಕ್ಕೆ ಕಾಂಗ್ರೆಸ್ ನಾಯಕರು ಒಪ್ಪದ ಹಿನ್ನಲೆಯಲ್ಲಿ ಎಸ್ ಡಿಪಿಐ ಅಧ್ಯಕ್ಷ - ಉಪಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿತ್ತು. ಕಾಂಗ್ರೆಸ್ ಉಪಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸದೆ ಜಾಣ ನಡೆ ಇರಿಸಿದರಿಂದ ಎಸ್ ಡಿಪಿಐ ಅಧ್ಯಕ್ಷ ಹುದ್ದೆಯಿಂದ ಹಿಂದಕ್ಕೆ ಸರಿಯಿತು.ಆ ಮೂಲಕ ಈ ಎರಡು ಪಕ್ಷಗಳು ಸ್ಥಾನವನ್ನು ಹಂಚಿಕೆ ಮಾಡಿಕೊಂಡು ಅಧಿಕಾರದ ಗದ್ದುಗೇಗೆರಿದ್ದಾರೆ.
ಅಭಿವೃದ್ಧಿ ಕಾರ್ಯ ನಡೆಸುವೆ – ವಾಸು ಪೂಜಾರಿ
ನೂತನ ಅಧ್ಯಕ್ಷ ವಾಸು ಪೂಜಾರಿ, ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿವೃದ್ಧಿ ಕಾರ್ಯಕ್ಕೆ ತನ್ನ ಆದ್ಯತೆ ಇದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ ಹಾಗೂ ಎಲ್ಲಾ ಸದಸ್ಯರ ಸಹಕಾರ ಪಡೆದು ಮೂಲಭೂತ ಸೌಕರ್ಯೊದಗಿಸುವುದರ ಜೊತೆಗೆ ಭ್ರಷ್ಟಾಚಾರ ರಹಿತ,ಪಾರದರ್ಶಕ ಆಡಳಿತ ನೀಡುವುದಾಗಿ ತಿಳಿಸಿದರು. ಈ ಸಂದರ್ಭ ಕಾಂಗ್ರೆಸ್ ಪುರಸಭಾ ಸದಸ್ಯರು, ಪಕ್ಷ ಪ್ರಮುಖರಾದ ಪಿಯೂಸ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ,ಪದ್ಮಶೇಖರ ಜೈನ್,ಮಾಯಿಲಪ್ಪ ಸಾಲಿಯಾನ್,ಮಹಮ್ಮದ್ ನಂದಾವರ ಮೊದಲಾದವರು ಉಪಸ್ಥಿತರಿದ್ದರಿ.
ಭ್ರಷ್ಟಾಚಾರರಹಿತ ಆಡಳಿತ - ಮುನೀಶ್ ಆಲಿ
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಉಪಾಧ್ಯಕ್ಷ ಮುನೀಶ್ ಆಲಿ, ತಾನು ಒಂದು ಪೈಸೆ ಭ್ರಷ್ಟಾಚಾರಕ್ಕೂ ಅವಕಾಶ ನೀಡದಂತೆ ಕೆಲಸ ಮಾಡುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ. ಪುರಸಭೆ ಭ್ರಷ್ಟಾಚಾರಮುಕ್ತವಾಗಿ ಆಡಳಿತ ಮಾಡಬೇಕು ಎಂಬ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ ಎಂದರು.