ಕಾರ್ಕಳ, ಆ.22(DaijiworldNews/AK):ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಮಾಳ ಗ್ರಾಮದ ಹುಕ್ರಟ್ಟೆಯ ಜನಿತ್ ಶೆಟ್ಟಿ (19) ಎಂಬಾತ ಬುಧವಾರ ಬೆಳಿಗ್ಗೆ ಮನೆಯಿಂದ ಶಿಕ್ಷಣ ಸಂಸ್ಥೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಡೋರ್ ಬಳಿ ಹೊರ ಎಸೆಯಲ್ಪಟ್ಟ ಪರಿಣಾಮವಾಗಿ ದಾರುಣ ರೀತಿಯಲ್ಲಿ ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಎಬಿವಿಪಿ ಕಾರ್ಯಕರ್ತರು ವಿವಿಧ ಬೇಡಿಕೆ ಮುಂದಿಟ್ಟು ರಸ್ತೆಗಿಳಿದು ಹೋರಾಟ ನಡೆಸಿದ್ದಾರೆ.
ಖಾಸಗಿ ಬಸ್ಗಳ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್ಟಿಒ) ನಿರ್ಲಕ್ಷ್ಯ ಧೋರಣೆ ಖಂಡಿಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಘಟಕದ ಕಾರ್ಯಕರ್ತರು ನಿಟ್ಟೆ ವಿದ್ಯಾ ಸಂಸ್ಥೆ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.
ತರಗತಿ ಇರುವ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಸರಕಾರಿ ಬಸ್ಗಳನ್ನು ಓಡಿಸಬೇಕು. ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.