ಮಂಗಳೂರು,, ಆ.21(DaijiworldNews/AK): ಕಾಂಗ್ರೆಸ್ ಶಾಸಕ ಐವನ್ ಡಿಸೋಜಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ವತಿಯಿಂದ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ನಂದನ್ ಮಲ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಆರಂಭದಲ್ಲಿ ಠಾಣೆಗೆ ಮುತ್ತಿಗೆ ಹಾಕುವ ಯತ್ನ ನಡೆಯಿತು. ಬಳಿಕ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಹಿಂಪಡೆಯಲಾಯಿತು.
ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರನ್ನು ಭೇಟಿ ಮಾಡಿದ ನಂತರ, ಯುವ ಮೋರ್ಚಾ ಮುಖಂಡರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದರು, ಎಫ್ಐಆರ್ ದಾಖಲಿಸಲು ಪೊಲೀಸರಿಗೆ 24 ಗಂಟೆಗಳ ಗಡುವು ನೀಡಿದರು. ನಾಳೆ ಸಂಜೆಯೊಳಗೆ ಎಫ್ಐಆರ್ ದಾಖಲಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಬರ್ಕೆ ಪೊಲೀಸ್ ಠಾಣೆಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ನಾಲ್ಕು ಕೆಎಸ್ ಆರ್ ಪಿ ಬಸ್ ಗಳನ್ನು ನಿಯೋಜಿಸಲಾಗಿತ್ತು. ಬಿಜೆಪಿ ಯುವ ಮೋರ್ಚಾ ಈ ಹಿಂದೆ ಆಗಸ್ಟ್ 19 ರಂದು ಸಂಜೆ ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ದೂರು ನೀಡಿತ್ತು, ಆದರೆ ಪೊಲೀಸರು ಎಫ್ಐಆರ್ ದಾಖಲಿಸದೆ ದೂರನ್ನು ಮಾತ್ರ ಸ್ವೀಕರಿಸಿದ್ದರು. ಮುಂದಿನ ಕ್ರಮ ಕೈಗೊಳ್ಳುವ ಮೊದಲು ಕಾನೂನು ಸಮಾಲೋಚನೆಯ ಅಗತ್ಯವನ್ನು ಪೊಲೀಸರು ಉಲ್ಲೇಖಿಸಿದ್ದು, ಯುವಮೋರ್ಚಾ ಪ್ರತಿಭಟನೆಯ ನಿರ್ಧಾರಕ್ಕೆ ಕಾರಣವಾಯಿತು.