ಕುಂದಾಪುರ, ಆ.21(DaijiworldNews/AK): ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ತಾಲೂಕಿನ ಕೋಟದ ಮಣೂರು ಗ್ರಾಮದ ಮಣೂರು ಬಸ್ ನಿಲ್ದಾಣದ ಬಳಿಯ ಕವಿತಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ವಿಫ್ಟ್ ಮತ್ತು ಇನ್ನೋವಾ ಕಾರುಗಳಲ್ಲಿ ಆಗಮಿಸಿದ ಸುಮಾರು 6-8 ಅಪರಿಚಿತ ವ್ಯಕ್ತಿಗಳ ಗುಂಪು, ಮನೆ ಗೇಟ್ ಹಾರಿ, ಅಕ್ರಮವಾಗಿ ಆವರಣಕ್ಕೆ ನುಗ್ಗಿ, ಮನೆ ಬಾಗಿಲು ತೆರೆಯಲು ವಿಫಲ ಯತ್ನ ನಡೆಸಿದೆ.
ಗೇಟ್ಗೆ ಹಾನಿ ಮಾಡಿದ ನಂತರ ಗುಂಪು ತಮ್ಮ ವಾಹನಗಳಲ್ಲಿ ಸ್ಥಳದಿಂದ ಪರಾರಿಯಾಗಿದೆ. ಘಟನೆ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿವಾಕರ ಪಿ ಎಂ, ಸಿಪಿಐ ಬ್ರಹ್ಮಾವರ ನೇತೃತ್ವದಲ್ಲಿ ಕೋಟ ಠಾಣಾ ಪಿಎಸ್ ಐ ಗುರುನಾಥ ಬಿ ಹಾದಿಮನಿ, ಸುಧಾ ಪ್ರಭು, ಹಿರಿಯಡ್ಕ ಠಾಣೆ ಪಿಎಸ್ ಐ ಮಂಜುನಾಥ್ ಅವರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಬೆಂಗಳೂರು, ಮಹಾರಾಷ್ಟ್ರ, ಸ್ಥಳೀಯ ಪ್ರದೇಶ ಸೇರಿದಂತೆ ವಿವಿಧೆಡೆ ತಂಡಗಳು ಶೋಧ ನಡೆಸಿವೆ.
ಆರೋಪಿಗಳನ್ನು ಪ್ರಸ್ತುತ ಮುಂಬೈನಲ್ಲಿ ವಾಸವಾಗಿರುವ ಚಿಕ್ಕಮಗಳೂರು ನಿವಾಸಿ ಸಂತೋಷ್ ನಾಯಕ್ (45) ಮತ್ತು ಪ್ರಸ್ತುತ ಮುಂಬೈನಲ್ಲಿ ವಾಸವಾಗಿರುವ ಪೊಲಿಪು ಕಾಪು ನಿವಾಸಿ ದೇವರಾಜ್ ಸುಂದರ್ ಮೆಂಡನ್ (46) ಎಂದು ಗುರುತಿಸಲಾಗಿದ್ದು, ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದೆ. ಬಂಧಿತ ವ್ಯಕ್ತಿಗಳು ಮನೆ ದರೋಡೆ ಮಾಡುವ ನೆಪವಾಗಿ ನಕಲಿ ಐಟಿ ದಾಳಿ ನಡೆಸುವ ಉದ್ದೇಶದಿಂದ ಮಹಾರಾಷ್ಟ್ರದಿಂದ ಬಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕೃತ್ಯದಲ್ಲಿ ಸ್ಥಳೀಯ ಸಹಚರರೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸಲು ತನಿಖೆ ಪ್ರಗತಿಯಲ್ಲಿದೆ.