ಮಂಗಳೂರು, ಆ.21(DaijiworldNews/AA): ನಗರದಲ್ಲಿ ಇದೇ ಮೊದಲ ಬಾರಿಗೆ ಮೆದುಳಿನ ಲಿಂಪೋಮಾ ಕಾಯಿಲೆಗೆ ಸ್ವಅಸ್ಥಿ ಮಜ್ಜಿಯ ಕಸಿಯನ್ನು (ಆಟೋಲೋಗಸ್ ಟ್ರಾನ್ಸ್ ಪ್ಲಾಂಟ್) ದೇರಳಕಟ್ಟೆಯ ಜುಲೇಖಾ ಯೆನೆಪೋಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಖ್ಯಾತ ರಕ್ತ ಶಾಸ್ತ್ರಜ್ಞ, ಡಾ| ರಾಜೇಶ್ ಕೃಷ್ಣ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಕದ್ರಿ ಮೂಲದ 59 ವಯಸ್ಸಿನ ವ್ಯಕ್ತಿಯೋರ್ವರು ಮೆದುಳಿನ ಲಿಂಪೋಮಾ ಕಾಯಿಲೆಗೆ ಕೀಮೋಥೆರಪಿಯನ್ನು ಪಡೆಯುತ್ತಿದ್ದರು. ಜುಲೇಖಾ ಯೆನೆಪೋಯ ಆಸ್ಪತ್ರೆಗೆ ಬಂದ ಈ ವ್ಯಕ್ತಿಯನ್ನು ಸ್ವಅಸ್ಥಿ ಮಜ್ಜಿ ಕಸಿಗೆ ಒಳಪಡಿಸಲು ನಿರ್ಧರಿಸಲಾಯಿತು. ಅವರ ಅಸ್ಥಿಮಜ್ಜಿಯನ್ನು ತೆಗೆದು ಶೀತಲೀಕರಿಸಿ, ಥಯೋಟೀಪಾ ಎಂಬ ಕೀಮೋಥೆರಪಿಯನ್ನು ನೀಡಿ ನಂತರ ರೋಗಿಯು ಅಸ್ಥಿಮಜ್ಜಿಯನ್ನು ಪುನಃ ಅಳವಡಿಸಲಾಯಿತು. ಬಳಿಕ ನಾಲ್ಕು ವಾರದಲ್ಲಿ ರೋಗಿಯು ಗುಣಮುಖರಾಗಿದ್ದಾರೆ.
ಥಯೋಟೀಪಾ ಎನ್ನುವುದು ಕೆಲವು ಕ್ಯಾನ್ಸರ್ಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಒಂದು ರೀತಿಯ ಕೀಮೊಥೆರಪಿ ಔಷಧವಾಗಿದೆ. ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ಹರಡುವಿಕೆಯನ್ನು ನಿಲ್ಲಿಸುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ದೇಹವನ್ನು ಕಸಿ ಮಾಡಲು ಮತ್ತು ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮೂಳೆ ಮಜ್ಜೆಯ ಕಸಿ ಮಾಡುವ ಮೊದಲು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತದೆ.
ಈ ಚಿಕಿತ್ಸೆ ನೀಡಿದ ತಂಡದಲ್ಲಿ 15 ವರ್ಷ ಯುನೈಟೆಡ್ ಕಿಂಗ್ಡಂನಲ್ಲಿ ಕೆಲಸದ ಅನುಭವ ಹೊಂದಿರುವ ಡಾ| ರಾಜೇಶ್ ಕೃಷ್ಣ, ಮಕ್ಕಳ ಕ್ಯಾನ್ಸರ್ ತಜ್ಞೆ ಡಾ| ಅನುಷಾ ಹೆಗ್ಡೆ, ರಕ್ತ ಬ್ಯಾಂಕ್ನ ತಜ್ಞೆ ಡಾ| ಇಂದಿರಾ ಪುತ್ರನ್ ಹಾಗೂ ಜುಲೇಖಾ ಯೆನೆಪೋಯ ಆಸ್ಪತ್ರೆಯ ಪರಿಣಿತ ಸಿಬ್ಬಂದಿಗಳಿದ್ದಾರೆ. ಈ ತಂಡದವರು ಅಲ್ಪಾವಧಿಯಲ್ಲಿ 30ಕ್ಕೂ ಹೆಚ್ಚಿನ ಅಸ್ಥಿ ಮಜ್ಜಿ ಕಸಿಯನ್ನು ಸುಸೂತ್ರವಾಗಿ ನಡೆಸಿದ್ದಾರೆ.
ಜುಲೇಖಾ ಯೆನೆಪೋಯ ಆಸ್ಪತ್ರೆ ಕುಲಪತಿ ಅಬ್ದುಲ್ಲಾ ಕುಂಞ ಹಾಗೂ ಉಪಕುಲಪತಿ ಡಾ| ವಿಜಯ ಕುಮಾರ್ ನೇತೃತ್ವದಲ್ಲಿ ಅನೇಕ ಕ್ಯಾನ್ಸರ್ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಸೇವೆಯನ್ನು ನೀಡುತ್ತಿರುವುದು ಗಮನಾರ್ಹ ವಿಷಯವಾಗಿದೆ.