ಕುಂದಾಪುರ, ಆ.21(DaijiworldNews/AA): ಈ ಹಿಂದೆ ಅನುಸರಿದ ನಿಯಮಗಳನ್ನೇ ಕಾಲೇಜಿನಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ (ಎನ್ಎಸ್ಯುಐ) ನೇತೃತ್ವದಲ್ಲಿ ಕಾಲೇಜಿನ ಮುಂಭಾಗದ ಗೇಟ್ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿನಿ ಸ್ವಾತಿ ಪೂಜಾರಿ, ಕಾಲೇಜಿನಲ್ಲಿ ಯಾವುದೇ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಬೆಂಬಲ ಸಿಗುತ್ತಿಲ್ಲ. ಅಲ್ಲದೇ ಏನೇ ಮಾಡುವುದಿದ್ದರೂ ವಿದ್ಯಾರ್ಥಿಗಳೇ ಕೈಯಿಂದ ಹಣ ಹಾಕಿ ಮಾಡಬೇಕಾಗಿದೆ. ಕಾಲೇಜಿನಿಂದಲೇ ಹಿಂದಿನಂತೆ ಬೆಂಬಲ ಸಿಕ್ಕರೆ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದರು.
ಎನ್.ಎಸ್.ಯು.ಐ ಅಧ್ಯಕ್ಷ ಸುಜನ್ ಶೆಟ್ಟಿ ಮಾತನಾಡಿ, ಈಗಾಗಲೇ ಪ್ರತಿಭಟನೆ ನಡೆಸಲಾಗಿದ್ದು, ಪ್ರಾಂಶುಪಾಲರು ಮನವಿ ಸ್ವೀಕರಿಸಿ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿದ್ದಾರೆ. ಒಂದು ವೇಳೆ ನಿಯಮ ಬದಲಾವಣೆ ಮಾಡದೇ ಇದ್ದಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶುಭಕರ ಆಚಾರಿ ಮಾತನಾಡಿ, ಪೋಷಕರ ದೂರಿನಂತೆ ವಿದ್ಯಾರ್ಥಿಗಳು ಹೊರಗಡೆ ತಿರುಗಾಡುತ್ತಿರುವುದರ ವಿರುದ್ಧ ಕ್ರಮ ವಹಿಸಬೇಕು ಎನ್ನುವ ವಿಚಾರವಾಗಿ ಕ್ರಮಕೈಗೊಂಡಿದ್ದ ಕುರಿತಾಗಿ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳು ನೀಡಿರುವ ಮನವಿಯನ್ನು ಸ್ವೀಕರಿಸಿ ಮ್ಯಾನೇಜ್ ಮೆಂಟಿನ ತೀರ್ಮಾನಕ್ಕಾಗಿ ಕಳಿಸಲಾಗುವುದು ಎಂದು ತಿಳಿದಿದ್ದಾರೆ.
ಪ್ರತಿಭಟನೆಯಲ್ಲಿ ಇಡೀ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತೀ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಗ್ರಾಮೀಣ ಭಾಗಗಳಿಂದ ಬರುತ್ತಿದ್ದು, ಬೆಳಿಗ್ಗೆ ಕೃಷಿ ಕೆಲಸ, ಹೈನುಗಾರಿಕೆ ಇತ್ಯಾದಿ ಮಾಡಿ ಕಾಲೇಜಿಗೆ ಬರುವಾಗ ತಡವಾಗುತ್ತದೆ. ಹೆಚ್ಚಿನ ಹಳ್ಳಿಗೆ ಈಗಲೂ ಸರಿಯಾದ ಬಸ್ ವ್ಯವಸ್ಥೆ ಇಲ್ಲ, ಬೆಳಿಗ್ಗೆ ತಿಂಡಿ ತಿನ್ನದೇ ಬಂದಾಗ ಒಂದು ತರಗತಿ ಆದ ಕೂಡಲೇ ಕ್ಯಾಂಟೀನ್ ಗೆ ಬರುತ್ತಿದ್ದೆವು. ತುರ್ತು ಕೆಲಸಕ್ಕೆ ಒಂದು ತರಗತಿಗೆ ರಜೆ ಹಾಕಿ ಹೋಗಲು, ಲೈಬ್ರೆರಿಗೆ ಹೋಗಲು, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿತ್ತು. ಆದರೆ ಈಗ ಕಾಲೇಜು ಆಡಳಿತ ಮಂಡಳಿ ಏಕಾಏಕೀ ನಿಯಮ ಬದಲಾವಣೆ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ಅತೀವ ತೊಂದರೆಯಾಗಿದೆ ಅದುದರಿಂದ ಹಿಂದೆ ಯಾವ ನಿಯಮಗಳು ಇದ್ದವೋ ಅದೇ ನಿಯಮಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಪ್ರತಿಭಟನಾಕಾರ ವಿದ್ಯಾರ್ಥಿಗಳು ಆಗ್ರಹಿಸಿದರು.
ಬಳಿಕ ಪ್ರಾಂಶುಪಾಲರು ಮನವಿ ಸ್ವೀಕರಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಫರ್ಜಾನ್, ಜಿಲ್ಲಾ ಉಪಾಧ್ಯಕ್ಷ ಸ್ವಸ್ತಿಕ್ ಶೆಟ್ಟಿ, ತಾಲೂಕು ಉಪಾಧ್ಯಕ್ಷ ವಿವೇಕ್, ಕಾಲೇಜು ಘಟಕಾಧ್ಯಕ್ಷ ಸುಮುಖ ಶೇರೇಗಾರ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಅದ್ನಾನ್ ಮೊದಲಾದವರು ಇದ್ದರು. ಈ ವೇಳೆ ಪೊಲಿಸರು ಭದ್ರತೆ ಒದಗಿಸಿದ್ದರು.