ಕುಂದಾಪುರ, ಆ.20(DaijiworldNews/AA): ಕೊರಗ ಸಮುದಾಯವರ ಭೂಮಿ ಸಮಸ್ಯೆಯನ್ನು ಅರಣ್ಯ ಇಲಾಖೆ, ಕಂದಾಯ ಇಲಾಖೆ ಸಮನ್ವಯತೆಯಿಂದ ವಿಶೇಷ ಆಧ್ಯತೆಯನ್ನಾಗಿ ತುರ್ತು ಪರಿಹರಿಸಿ, ಹೊಸ ಡೀಮ್ಡ್ ಪಟ್ಟಿಯನ್ನು ಪರಾಮರ್ಶಿಸಿ, ಭಾಗಶಃ ಡೀಮ್ಡ್ ಇರುವಲ್ಲಿ ಹಕ್ಕುಪತ್ರವನ್ನು ನೀಡಲು ಅವಕಾಶ ಇರುವಲ್ಲಿ ಕೂಡಲೇ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೊರಗ ಸಮುದಾಯ ಎದುರಿಸುತ್ತಿರುವ ಭೂಮಿ ಸಮಸ್ಯೆಯ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ವಾಸ್ತವ್ಯ ಇರುವವರಿಗೆ ಇರುವ ಸ್ಥಳಕ್ಕೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕು. ಕೆಲವೆಡೆ ಅದು ಸಂಪೂರ್ಣ ಡೀಮ್ಡ್ ಆಗಿದ್ದರೆ ಮುಂದಿನ ಪರಿಹಾರ ಕ್ರಮಗಳ ಬಗ್ಗೆ ಸಮಾಲೋಚಿಸಬೇಕು. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ ಸಮಸ್ಯೆಗೆ ಸಾಧ್ಯವಾದಷ್ಟು ಪರಿಹಾರ ಕಂಡುಕೊಳ್ಳಬೇಕು, ಕೊರಗ ಸಮುದಾಯದ ಭೂಮಿ ಸಮಸ್ಯೆ ಬಗೆ ಹರಿಸುವಲ್ಲಿ ಎರಡು ಇಲಾಖೆಗಳ ಕೆಲಸ ಪ್ರಮುಖವಾಗಿದೆ. ಮತ್ತೆ ಮತ್ತೆ ಮುಗ್ದ ಜನರಿಗೆ ಭರವಸೆ ಕೊಡುವುದು ಆಗಬಾರದು. ಅವರಿಗೆ ಹಕ್ಕುಪತ್ರ ಸಿಗಬೇಕು, ಅದರಿಂದ ಅವರಿಗೆ ಪ್ರಯೋಜನವಾಗಬೇಕು ಎಂದು ಶಾಸಕರು ಹೇಳಿದರು.
ತಹಶೀಲ್ದಾರ್ ಶೋಭಾಲಕ್ಷ್ಮೀ ಮಾತನಾಡಿ ಕುಂದಾಪುರ ಕ್ಷೇತ್ರ ವ್ಯಾಪ್ತಿಯ ಹಾರ್ದಳ್ಳಿ ಮಂಡಳ್ಳಿಯ ಮಣಿಗೇರಿ, ಜನ್ನಾಡಿ, ಕೊಳನಕಲ್ಲು, 76 ಹಾಲಾಡಿ, ಕಾಸಾಡಿ, ಯಡಾಡಿ ಮತ್ಯಾಡಿಗಳಲ್ಲಿ ಭೂಮಿ ಸಮಸ್ಯೆ ಇದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾತನಾಡಿ, ಕೊರಗ ಸಮುದಾಯ ಅರಣ್ಯಕ್ಕೆ ಹೊಂದಿಕೊಂಡೇ ಇರುವ ಜನಾಂಗ, ಕಾನೂನು ಅರಿವಿಲ್ಲದೆ ಅವರು ಅರಣ್ಯ ಅಂಚಿನಲ್ಲಿ ವಾಸ್ತವ್ಯ ಮಾಡುತ್ತಾರೆ. ಇಂಥವರನ್ನು ಒಕ್ಕಲೆಬ್ಬಿಸಬಾರದೆಂದು ಸರ್ಕಾರವೇ ಸೂಚಿಸಿದೆ. ಅರಣ್ಯ ಕಾಯ್ದೆಯಲ್ಲಿಯೂ ಕೂಡಾ ಸಾಕಷ್ಟು ರಿಯಾಯತಿಗಳನ್ನು ನೀಡಿದೆ. ಡೀಮ್ಡ್ ಪಟ್ಟಿಯನ್ನು ಮತ್ತೆ ಪರಿಶೀಲಿಸಲಾಗುವುದು ಎಂದರು.
ಕುಂದಾಪುರದ ಅಂಬೇಡ್ಕರ್ ನಗರದಲ್ಲಿ ಕೊರಗ ಸಮುದಾಯಕ್ಕೆ ಇನ್ನೂ ಹಕ್ಕುಪತ್ರ ಆಗದ ಬಗ್ಗೆ ಪುರಸಭಾ ಸದಸ್ಯ ಪ್ರಭಾಕರ ಹಾಗೂ ಫಲಾನುಭವಿಗಳು ಸಭೆಯ ಗಮನ ಸಳೆದರು. ಪ್ರಾರಂಭದಲ್ಲಿ ಈ ಸ್ಥಳ ಪರಂಭೂಕು ಇರಲಿಲ್ಲ, ಈಗ ಪರಂಭೂಕು ಎನ್ನುತ್ತಾರೆ. ಇದೇ ಸರ್ವೇ ನಂಬರ್ ನಲ್ಲಿ ಬೇರೆಯವರಿಗೆ ಹಕ್ಕುಪತ್ರವಾಗಿದೆ ಎಂದು ಫಲಾನುಭವಿಗಳು ಆರೋಪಿಸಿದರು. ಡೀಮ್ಡ್ ಫಾರೆಸ್ಟ್ ಕೊರಗ ಸಮುದಾಯಕ್ಕೆ ಮಾತ್ರ ಅನ್ವಯವಾಗುತ್ತದಾ? ಬೇರೆಯವರಿಗೆ ಇಲ್ಲದ ಡೀಮ್ಡ್ ಕೊರಗ ಕುಟುಂಬಗಳ ಭೂಮಿಗೆ ಡೀಮ್ಡ್ ಬರುತ್ತದೆ ಎಂದು ಕೊರಗ ಸಮುದಾಯದ ಮಹಿಳೆಯೋರ್ವರು ಶಾಸಕರ ಮುಂದಿಟ್ಟರು.
ಐಟಿಡಿಪಿ ಅಧಿಕಾರಿಗಳು ಇಲಾಖಾ ವತಿಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಕುಮಾರ ದಾಸ್ ಕೊರಗ ಸಮುದಾಯದ ಭೂಮಿ ಸಮಸ್ಯೆಯನ್ನು ವಿವರಿಸಿದರು.
ಸಭೆಯಲ್ಲಿ ಡಿ.ಎಫ್.ಓ ಗಣಪತಿ., ಎ.ಸಿ.ಎಫ್ ಪ್ರಕಾಶ್ ಪೂಜಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕೆ.ಜಿ., ಉಪಸ್ಥಿತರಿದ್ದರು.