ಬಂಟ್ವಾಳ, ಆ.20(DaijiworldNews/AA): ದೇವರಾಜ್ ಅರಸ್ 109 ನೇ ಜನ್ಮದಿನಾಚರಣೆಯನ್ನು ಬಂಟ್ವಾಳ ತಾಲೂಕು ಪಂಚಾಯತ್, ಬಂಟ್ವಾಳ ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಂಟ್ವಾಳ ಇವರ ಆಶ್ರಯದಲ್ಲಿ ಇಂದು ಬಿ.ಸಿ.ರೋಡಿನ ತಾ.ಪಂ. ಎಸ್ ಜೆ ಎಸ್ ಆರ್ ವೈ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಅವರು, ವಿದ್ಯಾರ್ಥಿಗಳು ದೇವರಾಜು ಅರಸು ಅವರ ದೂರದೃಷ್ಟಿಯ ಚಿಂತನೆಗಳ ಬಗ್ಗೆ ಅಧ್ಯಯನ ನಡೆಸಿ, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಶಕ್ತಿ ದೇಶದ ಬಹುದೊಡ್ಡ ಆಸ್ತಿ, ಇದನ್ನು ನಮ್ಮ ಯುವ ಸಮಾಜ ಅರಿತುಕೊಂಡು ದೇಶದ ಬಗ್ಗೆ ಚಿಂತಿಸಿ, ಕಾರ್ಯಪ್ರವೃತ್ತರಾಗಬೇಕು. ಅರಸು ಅವರು ಹಾಕಿಕೊಟ್ಟ ಹಲವು ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಮಾತನಾಡಿ, ದೇವರಾಜು ಅರಸು ಅವರು, ರಾಜಕೀಯದ ಮೂಲಕವೂ ಸಾಮಾಜಿಕ ಸುಧಾರಣೆ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟವರು. ಮುಖ್ಯಮಂತ್ರಿಯಾಗಿದ್ದ ಎರಡು ಅವಧಿಯಲ್ಲಿಯೂ ಸಾಮಾಜಿಕ ಪರಿವರ್ತನೆಯ ಕಾರ್ಯ ನಡೆಸಿದವರು, ಅವರ ನಡೆನುಡಿಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.
ತಾ.ಪಂ. ವಿಸ್ತರಣಾಧಿಕಾರಿ ನರಸಿಂಹ ಮೂರ್ತಿ, ಇಲಾಖಾ ವಸತಿನಿಲಯಗಳ ಮೇಲ್ವಿಚಾರಕರಾದ ಪುಷ್ಪಲತಾ, ಭವಾನಿ, ಅರುಣ್, ಅಂಬುಜಾಕ್ಷಿ, ವಿಶ್ವನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂಧ್ಯಾ ನಾಯಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು. ಇದೇ ಸಂದರ್ಭ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಸತಿನಿಲಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೇವರಾಜು ಅರಸು ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು.
ವಾಮದಪದವು ನಿಲಯ ಮೇಲ್ವಿಚಾರಕಿ ಭವಾನಿ ಕಾರ್ಯಕ್ರಮ ನಿರ್ವಹಿಸಿದರು. ದೀಪಾ, ಜೀವಿತಾ ಸಹಕರಿಸಿದರು.