ಕುಂದಾಪುರ, ಆ.20(DaijiworldNews/AA): ಹೆಮ್ಮಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಹುಂಡಿಯ ಹಣವನ್ನು ಕದ್ದ ಕಳ್ಳ, ಅದನ್ನು ಸಮೀಪದ ಶಾಲೆಯೊಂದರಲ್ಲಿ ಬಿಟ್ಟು ಹೋಗಿರುವುದು ಸೋಮವಾರ ಸಂಜೆ ಪತ್ತೆಯಾಗಿದೆ.
ಸೋಮವಾರ ದೇಗುಲದಲ್ಲಿ ಸತ್ಯನಾರಾಯಣ ಪೂಜೆ ನಡೆದಿದ್ದು, ಹಣ ಪತ್ತೆಯಾಗಿದ್ದು ಪವಾಡ ಎಂದು ಸ್ಥಳೀಯರು ತಿಳಿಸಿದ್ದಾರೆ.
ದೇವಸ್ಥಾನದ ಅರ್ಚಕರ ಕಚೇರಿಯಿಂದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಜೊತೆಗೆ ಪಕ್ಕದ ಮೂರು ಮನೆಗಳಲ್ಲಿ ಅಲ್ಪಸ್ವಲ್ಪ ಹಣವನ್ನೂ ಕದ್ದಿದ್ದಾನೆ.
ದೇವಸ್ಥಾನದ ಸಮೀಪದಲ್ಲಿರುವ ಹೆಮ್ಮಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಶನಿವಾರವೇ ಶಾಲೆಯ ವರಾಂಡದಲ್ಲಿ ಹಸಿರು ಚೀಲವೊಂದನ್ನು ಗಮನಿಸಿದ್ದಾರೆ. ಆದರೆ, ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಳಿಕ ಸೋಮವಾರವೂ ಅದೇ ಸ್ಥಳದಲ್ಲಿ ಬ್ಯಾಗ್ ಬಿದ್ದಿದ್ದರಿಂದ ಕುತೂಹಲಗೊಂಡ ವಿದ್ಯಾರ್ಥಿಗಳು ಅದನ್ನು ತೆರೆದು ನೋಡಿದ್ದಾರೆ. ಈ ವೇಳೆ ಬ್ಯಾಗ್ನಲ್ಲಿ ಹಣ ಪತ್ತೆಯಾಗಿದೆ.
ಶಾಲೆಯ ಮುಖ್ಯ ಶಿಕ್ಷಕರು ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದು, ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮಧ್ಯಾಹ್ನ ಸ್ಥಳಕ್ಕೆ ಪಿಎಸ್ ಐ ಪುಷ್ಪಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹಣ ಜಪ್ತಿ ಮಾಡಿದ್ದಾರೆ. ಬಳಿಕ ಹಣವನ್ನು ದೇವಸ್ಥಾನಕ್ಕೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ.
ಕಳ್ಳ ಒಟ್ಟು 45,000 ರೂ.ನಗದನ್ನು ಕದ್ದೊಯ್ದಿದ್ದ. ಆದರೆ ಬ್ಯಾಗ್ ನಲ್ಲಿ ಕೇವಲ 3,035 ರೂ. ಹಣ ಪತ್ತೆಯಾಗಿದೆ. ಕಳ್ಳ ಉಳಿದ ಹಣವನ್ನು ಬೇರೆಡೆ ಇಟ್ಟಿರಬಹುದು ಎಂದು ಶಂಕಿಸಲಾಗಿದೆ.