ಮಂಗಳೂರು,ಮೇ 25 (Daijiworld News/MSP): ಮನೆ ಅಥವಾ ಕಟ್ಟಡ ಕಾಮಗಾರಿಗೆ ಮರಳು ಅಗತ್ಯವಿರುವ ಗ್ರಾಹಕರು ಇನ್ನು ಮರಳಿಗಾಗಿ ಹುಡುಕುವ ಅಗತ್ಯವಿಲ್ಲ ಮತ್ತು ಮರಳು ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಗ್ರಾಹಕರನ್ನು ಮುಕ್ತಗೊಳಿಸಲು “ಸ್ಯಾಂಡ್ ಬಜಾರ್’ ಮೊಬೈಲ್ ಆ್ಯಪ್ ಬಿಡುಗಡೆ ಮಾಡುವ ಮೂಲಕ ಜಿಲ್ಲಾಡಳಿತವು ನಾಗರಿಕರ ನೆರವಿಗೆ ಬಂದಿದೆ.
ಹೀಗಾಗಿ ಇನ್ನು ಚಿಂತೆ ಇಲ್ಲದೆ ಮರಳು ಬೇಕಾದ ಗ್ರಾಹಕರು ತಾವು ಇದ ಪ್ರದೇಶದಿಂದಲೇ ತಮಗೆ ಬೇಕಾಗಿರುವಷ್ಟು ಮರಳು ಬುಕ್ಕಿಂಗ್ ಮಾಡಬಹುದು. ಜಿಲ್ಲಾಡಳಿತ ಜಾರಿಗೆ ತಂದ ಆ್ಯಪ್ ಗೆ ಈಗಾಗಲೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಯಾಕೆಂದರೆ ಈಗಾಗಲೇ ಈ ಆ್ಯಪ್ ಬಳಸಿ 43 ಜನರು ಮರಳು ಕಾಯ್ದಿರಿಸಿದ್ದಾರೆ. ಅಲ್ಲದೆ ಈ ಪೈಕಿ ಈಗಾಗಲೇ 18 ಜನರಿಗೆ ಮರಳು ಸರಬರಾಜು ಮಾಡಲಾಗಿದೆ.
‘ಸ್ಯಾಂಡ್ ಬಜಾರ್’ ಆಯಪ್ ಮೂಲಕ ಮರಳು ಖರೀದಿಸಲು ಬಯಸುವ ಗ್ರಾಹಕರು ಮೊದಲು ಆಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ಸಂಪೂರ್ಣ ವಿಳಾಸ, ಮರಳು ಪೂರೈಕೆ ಮಾಡಬೇಕಾದ ಸ್ಥಳ, ಹತ್ತಿರವಿರುವ ಮರಳು ಧಕ್ಕೆ ಸ್ಥಳ , ಆಧಾರ್ ನಂಬರ್, ನಂತರ ಓಟಿಪಿ ಸಂಖ್ಯೆ ನಮೂದಿಸಿದರೆ ಮರಳಿನ ದರ ಕುರಿತಾದ ಮಾಹಿತಿ ದೊರಕುತ್ತದೆ. ಗ್ರಾಹಕರು ಆನ್ ಲೈನ್ನಲ್ಲೇ ಪೇಟಿಎಂ, ನೆಟ್ಬ್ಯಾಕಿಂಗ್ ಮೂಲಕ ಹಣ ಪಾವತಿ ಮಾಡಿ ಮರಳು ಖರೀದಿಸಬಹುದಾಗಿದೆ.
ಹಣ ಪಾವತಿ ಬಳಿಕ ಮೊಬೈಲ್ ಸಂದೇಶ ಬರಲಿದ್ದು ಅದನ್ನು ಸಂಬಂಧಪಟ್ಟ ಮರಳು ಧಕ್ಕೆಯ ಗಮನಕ್ಕೆ ತರಬೇಕು. ಜತೆಗೆ ಧಕ್ಕೆಗೆ ಕಂಟ್ರೋಲ್ ರೂಂನಿಂದ ಸಂದೇಶ ಹೋಗಲಿದೆ. ಇದರ ಆಧಾರದ ಮೇಲೆಯೇ ಮರಳು ಸಾಗಾಟ ನಡೆಯಲಿದೆ. ಮರಳು ಧಕ್ಕೆಯ ವಿವರ ಗೂಗಲ್ ಮ್ಯಾಪ್ ವಿವ್ ನಲ್ಲೂ ಲಭ್ಯವಿದೆ.
ಮರಳು ಬುಕ್ಕಿಂಗ್ ಆದ ನಿಗದಿಪಡಿಸಿದ ದಿನದೊಳಗೆ ಸಂಬಂಧಪಟ್ಟ ಮರಳು ಲಾರಿಯವ ಸಾಗಾಟ ಮಾಡಬೇಕು. ಮರಳು ಸಾಗಾಟ ಮಾಡುವಲ್ಲಿ ವಿಳಂಬವಾದರೆ ಆ ಲಾರಿಯ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಇದೇ ರೀತಿ ಪುನಾರವರ್ತಿತವಾಗಿ ಮೂರು ಬಾರಿ ಇದೇ ರೀತಿ ಲೋಪವಾದರೆ ಆ ಲಾರಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.