ಸುಳ್ಯ, ಆ.19(DaijiworldNews/AA): ಸಕಲೇಶಪುರ-ಬಾಳ್ಳುಪೇಟೆ ನಡುವಿನ ಮಂಗಳೂರು-ಬೆಂಗಳೂರು ರೈಲು ಹಳಿ ಮೇಲೆ ಗುಡ್ಡ ಕುಸಿತದಿಂದ ಬಿದ್ದಿರುವ ಮಣ್ಣು ತೆರವು ಕಾರ್ಯ ಭರದಿಂದ ಸಾಗಿದೆ.
ವಾರದ ಹಿಂದೆ ಗುಡ್ಡ ಕುಸಿದಿದ್ದ ಜಾಗದಲ್ಲಿ ಶುಕ್ರವಾರ ಮತ್ತೆ ಮಣ್ಣು ಕುಸಿದಿತ್ತು. ಇದೇ ಕಾರಣಕ್ಕೆ ರೈಲು ಸಂಚಾರವನ್ನು ಮತ್ತೊಮ್ಮೆ ಸ್ಥಗಿತಗೊಳಿಸಲಾಗಿತ್ತು. ಮೂರು ದಿನಗಳಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ನಾಲ್ಕು ಐದು ಹಿಟಾಚಿ ಯಂತ್ರಗಳನ್ನು ಕಾಮಗಾರಿಗೆ ಬಳಸಲಾಗಿದೆ. ಮತ್ತಷ್ಟು ಮಣ್ಣು ಕುಸಿಯದಂತೆ ತಡೆಯಲು ಬೆಟ್ಟದ ಮೇಲಿನಿಂದ ಕೂಡ ಮಣ್ಣು ತೆರವುಗೊಳಿಸಲಾಗುತ್ತಿದೆ. ಆದರೂ ಮಣ್ಣು ಕುಸಿಯುತ್ತಿದ್ದು, ರೈಲ್ವೆ ಹಳಿಯಲ್ಲಿ ಕೆಸರು ಮಿಶ್ರಿತ ಮಣ್ಣು ತುಂಬಿದೆ. ಜತೆಗೆ ಮತ್ತಷ್ಟು ಮಣ್ಣು ಕುಸಿಯದಂತೆ ರಿಟೈನರ್ ವಾಲ್ ಕಾಮಗಾರಿ ಕೂಡ ಮಾಡಲಾಗುತ್ತಿದೆ.
ಈ ಭಾಗದಲ್ಲಿ ಕೆಸರು ಸಡಿಲವಾಗಿರುವುದರಿಂದ ಇಷ್ಟೊಂದು ಸವಾಲು ಎದುರಾಗುತ್ತಿದೆ. ಈ ಭಾಗದಲ್ಲಿ ಮತ್ತೆ ರೈಲು ಸಂಚಾರಕ್ಕೆ ಇನ್ನು ಕೆಲ ದಿನಗಳು ಬೇಕಾಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.