ಉಡುಪಿ, ಆ.18(DaijiworldNews/AA): ಹೆಜಮಾಡಿ ಮತ್ತು ಸಾಸ್ತಾನದ ಟೋಲ್ಗೇಟ್ಗಳಲ್ಲಿ ಸಂಚರಿಸುವ ಬಸ್ಗಳಲ್ಲಿ ದುಪ್ಪಟ್ಟು ಶುಲ್ಕ ವಿಧಿಸುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲು ಕೆನರಾ ಬಸ್ ಮಾಲೀಕರ ಸಂಘ ನಿರ್ಧರಿಸಿದೆ.
ನಗರದ ಪುರಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಬಸ್ಸುಗಳಿಗೆ ಸಾಮಾನ್ಯ ಟೋಲ್ ಶುಲ್ಕದ ಜೊತೆಗೆ, ಟೋಲ್ ಗೇಟ್ ಅಧಿಕಾರಿಗಳು ತಮ್ಮ ಖಾತೆಯಿಂದ ಭಾರೀ ವಾಹನಗಳ ಟೋಲ್ ಶುಲ್ಕವನ್ನು ಕಡಿತಗೊಳಿಸುತ್ತಿದ್ದಾರೆ. ಈ ಹಿಂದೆಯೂ ಹೀಗಾಗುತ್ತಿತ್ತು ಎಂದು ಬಸ್ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಹಾಗೂ ಸಂಸದರಿಗೆ ಮನವಿ ಸಲ್ಲಿಸಲಾಗುವುದು. ಎರಡು ದಿನದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಹೆಜಮಾಡಿ ಮತ್ತು ಸಾಸ್ತಾನದ ಟೋಲ್ಗೇಟ್ಗಳ ಮೂಲಕ ಹಾದು ಹೋಗುವ ಬಸ್ಗಳನ್ನು ಆಗಸ್ಟ್ 23 ರಂದು ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಟೋಲ್ಗೇಟ್ ಅಧಿಕಾರಿಗಳು ಹೊಣೆಯಾಗುತ್ತಾರೆ ಎಂದು ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.